Select Your Language

Notifications

webdunia
webdunia
webdunia
webdunia

ವಾಸ್ತವ ಬದುಕಿಗೆ ಕನ್ನಡಿಯಾಗುವ ಕಥಾ ವಸ್ತು: ಕಾಯ್ಕಿಣಿ

ವಾಸ್ತವ ಬದುಕಿಗೆ ಕನ್ನಡಿಯಾಗುವ ಕಥಾ ವಸ್ತು: ಕಾಯ್ಕಿಣಿ
ಮೂಡುಬಿದಿರೆ , ಶನಿವಾರ, 29 ನವೆಂಬರ್ 2008 (11:09 IST)
ಅವಿನಾಶ್ ಬಿ.

ಕಥೆ ಎಂದರೆ ನಿರ್ಜೀವ ವಸ್ತುಗಳಿಗೆ ಸಂಬಂಧಿಸಿದ್ದಲ್ಲ, ಜೀವ ಇದ್ದರೆ ಮಾತ್ರ ಅಲ್ಲೊಂದು ಕಥೆ ಇರುತ್ತದೆ ಎಂದವರು ಕಥೆಗಾರ ಜಯಂತ ಕಾಯ್ಕಿಣಿ.

ಶುಕ್ರವಾರ ಸಂಜೆ ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಪ್ರಯುಕ್ತ 'ಕಥಾಸಮಯ'ದಲ್ಲಿ ಅವರು ಕಥೆ ಹೇಳದೆಯೇ, ನಿಜ ಜೀವನದ ಘಟನೆಗಳು, ಮಾನವ ವಿನ್ಯಾಸಗಳು ಹೇಗೆ ಕಥಾವಸ್ತುವಾಗುತ್ತವೆ, ಈ ಮೂಲಕ ಕಥಾ ಸಾಹಿತ್ಯಕ್ಕೆ ಹೇಗೆ ಜೀವಂತಿಕೆ ಬರುತ್ತದೆ ಎಂಬುದನ್ನು ನಿರರ್ಗಳ ವಾಗ್ಝರಿಯಿಂದ ಬಿಚ್ಚಿಟ್ಟರು.

ತರಗತಿಯಲ್ಲಿ ಡೆಸ್ಕ್ ಇದೆ ಎಂದಾದರೆ ಅದರಲ್ಲಿ ಕಥೆ ಮುಂದುವರಿಸುವುದು ಸಾಧ್ಯವಿಲ್ಲ. ಆದರೆ ಆ ಡೆಸ್ಕಿನಲ್ಲಿ ಒಂದು ಹೃದಯದ ಚಿತ್ರವಿದೆ ಮತ್ತು ಅದರ ಮೇಲೊಂದು ಬಾಣದ ಗುರುತಿದೆ.. ಎಂದು ಹೇಳಿದರೆ ಅಲ್ಲಿ ಶುರುವಾಗುತ್ತದೆ ಕಥೆ. ಬೆಳಗ್ಗೆ 9.30ಕ್ಕೆ ಸಾಗರದಿಂದ ಮೂಡುಬಿದಿರೆಗೆ ಬಸ್ ಬರುತ್ತದೆ ಎಂದರೆ ಕಥೆಯಲ್ಲ..ಆ ದಿನ ಆ ಬಸ್ ಬರಲಿಲ್ಲ ಎಂದಾಗ ಅಲ್ಲಿ ಶುರುವಾಗುತ್ತದೆ ಕಥೆ... ಎನ್ನುತ್ತಾ ಮಾತಿಗಾರಂಭಿಸಿದರು.

ಹರಿಕಥಾ ಕಾಲಕ್ಷೇಪವಲ್ಲ ಇದು, ಇದು ಕಥಾ ಸಮಯ. ಇಲ್ಲಿ ಕಥೆ ಓದಿಬಿಟ್ಟರೆ, ಅಥವಾ ಕಥೆಯೊಂದರ ತುಣುಕು ಹೇಳಿದರೆ ಅದರ ತಲೆಬುಡ ಅರ್ಥವಾಗಲಾರದು. ಕಥೆಯು ಮಾನವ ವಿನ್ಯಾಸಗಳ ಸುತ್ತ, ಜೀವಂತ ವಸ್ತುಗಳ ಸುತ್ತ ಮತ್ತು ಮಾನವೀಯ ಮುಖದೊಂದಿಗೆ ತಳುಕು ಹಾಕಿಕೊಂಡಿರುತ್ತದೆ ಎಂದ ಅವರು ತಾವು ಗೋಕರ್ಣದ ಸುತ್ತಮುತ್ತ, ಮುಂಬಯಿ ಜೀವನದ ಸಂದರ್ಭಗಳಲ್ಲಿ ಎದುರಾದ ನೈಜ ಘಟನೆಗಳು ಕಥೆಗೆ ಹೇಗೆ ಪ್ರೇರಣೆ ನೀಡುತ್ತವೆ ಮತ್ತು ಪೂರಕವಾಗುತ್ತವೆ ಎಂಬುದನ್ನು ವಿವರಿಸಿದರು ಕಾಯ್ಕಿಣಿ.

ಕಥೆಗೆ ಭಾಷೆ, ಸಾಹಿತ್ಯ ಬೇಕಿಲ್ಲ. ಕಣ್ಣಿನಲ್ಲೇ ಕಥೆ ಹೇಳಬಹುದು. ಕಣ್ಣಿಲ್ಲದವರೂ ಕಥಾವಸ್ತುವಾಗಬಲ್ಲರು ಎಂದ ಕಾಯ್ಕಿಣಿ, ಗೋಕರ್ಣ ಕಡತಲತೀರದಲ್ಲಿ ಹಿರಿಯರೊಬ್ಬರ ಜತೆ ಸೂರ್ಯಾಸ್ತ ನೋಡಲು ಹೋಗುತ್ತಿದ್ದ ಪ್ರಸಂಗವೊಂದನ್ನು ವಿವರಿಸಿದರು.
WD
ಗೋಕರ್ಣಕ್ಕೆ ನಾಟಕ ಕಂಪನಿಯೊಂದಿಗೆ ಬಂದಿದ್ದರು ಹಾರ್ಮೋನಿಯಂ ಕಲಾವಿದರೊಬ್ಬರು ಹಿರಿಯರು. ಅವರಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಇತರ ಕಲಾವಿದರೊಂದಿಗೆ ಅವರೂ ಗೋಕರ್ಣದಲ್ಲಿ ಸೂರ್ಯಾಸ್ತ 'ನೋಡಲು' ತೆರಳುತ್ತಿದ್ದರು. ನಾವೆಲ್ಲಾ ಚಿಕ್ಕ ಮಕ್ಕಳು. ಅಜ್ಜ ಅಜ್ಜ ಎನ್ನುತ್ತಾ ಅವರ ಕೈಹಿಡಿದು ಕರೆದುಕೊಂಡು ಹೋಗುತ್ತಿದ್ದೆವು. ಬೀಚ್‌ಗೆ ಹೋಗಿ ಸೂರ್ಯ ಮುಳುಗಿದ ನಂತರ ಅವರ ಬಾಯಿಂದ ಬಂದ ಮಾತು ತಮ್ಮನ್ನು ತೀವ್ರ ಯೋಚನೆಗೀಡು ಮಾಡಿತು. ಅವರು ಕೇಳಿದ್ದರು 'ಆತೇನೂ'? ಕಣ್ಣು ಕಾಣಿಸದ ವ್ಯಕ್ತಿಯೊಬ್ಬರು ಸೂರ್ಯಾಸ್ತವನ್ನು ಯಾವ ರೀತಿ ಕಲ್ಪಿಸಿಕೊಂಡಿರಬಹುದು ಎಂಬುದು ಚಿಂತನೆಗೆ ಹಚ್ಚಿತು ಎಂದರು ಕಾಯ್ಕಿಣಿ.

ಮತ್ತೊಂದು ಪ್ರಸಂಗ. ಗೋಕರ್ಣದಲ್ಲೊಬ್ಬ ಮರುಳ (ಮಾನಸಿಕ ಅಸ್ವಸ್ಥ) ಇದ್ದ. ಆತ ಬೆಳಗ್ಗೆ ಪೂರ್ವ ದಿಕ್ಕಿಗೆ ತಿರುಗಿ ಬಾರೋ.. ಬಾ.. ಎನ್ನುತ್ತಿದ್ದ. ಆಗ ಸೂರ್ಯೋದಯ ಆಗುತ್ತಿತ್ತು. ಸಾಯಂಕಾಲ ಗೋಕರ್ಣ ಬೀಚಿನಲ್ಲಿ ನಿಂತು ಪಶ್ಚಿಮಕ್ಕೆ ಮುಖ ಮಾಡಿ ಹೋಗು.. ಹೋಗು ಎನ್ನುತ್ತಾ ಸಿಕ್ಕಾಪಟ್ಟೆ ಬೈಯುತ್ತಿದ್ದ. ಆಗ ಸೂರ್ಯ ಮುಳುಗುತ್ತಿದ್ದ.. ಸೂರ್ಯನನ್ನು ನಾನೇ ಕರೆದೆ ನಾನೇ ಓಡಿಸಿದೆ ಎಂಬ ಹೆಮ್ಮೆಯಿಂದಾತ ಮನೆಗೆ ಹೋಗುತ್ತಿದ್ದ. ಇದು ಕಥೆಯೇ..? ಆದರೆ ಆತನ ಪಾಲಿಗೆ ಅದು ವಾಸ್ತವ. ಈ ಘಟನೆ ನನ್ನನ್ನು ತುಂಬಾ ಕಾಡಿದೆ ಎಂದು ನುಡಿದರು ಕಾಯ್ಕಿಣಿ.

ಇನ್ನೊಂದು ಮುಂಬಯಿ ಘಟನೆ. ಜೋರು ಮಳೆ... ಅಂತಿಂಥದ್ದಲ್ಲ, ಭಯಂಕರ ಎನ್ನಬಹುದಾದ ಮಳೆ. ರಸ್ತೆಯಲ್ಲಿ ಪ್ರವಾಹ, ಟ್ರಾಫಿಕ್ ಜಾಮ್ ಎಲ್ಲದರಿಂದಾಗಿ ಬಹುತೇಕ ಎಲ್ಲರೂ 18 ಗಂಟೆಗಳ ಕಾಲ ಇದ್ದಲ್ಲೇ ಇರಬೇಕಾಯಿತು. ಯಾವತ್ತಿಗೂ ಒಳಗಿದ್ದವರು ಹೊರಗಿನವರಿಗೆ (ಭಿಕ್ಷುಕರಿಗೆ) ಕೊಡುತ್ತಿದ್ದರು. ಆದರೆ ಪರಿಸ್ಥಿತಿಯೇ ಬದಲು. ಹೊರಗಿದ್ದವರು ಒಳಗಿನವರಿಗೆ ತಿಂಡಿ, ಬ್ರೆಡ್ಡು, ಬಿಸ್ಕತ್ತು ಕೊಡುವುದು, ಶಾಲೆಗೆ ಹೋಗುವ ಮಕ್ಕಳು ತಮ್ಮ ಬುತ್ತಿಯಲ್ಲಿದ್ದ ತಿಂಡಿಯನ್ನು ಟ್ಯಾಕ್ಸಿಯೊಳಗೆಯೇ ಇರಬೇಕಾದವರಿಗೆ ನೀಡುವುದು, ಪಕ್ಕದಲ್ಲೇ ಇದ್ದ ಮನೆಯವರು ನಮ್ಮನ್ನು ಕರೆದು ಬನ್ನಿ, ಇಲ್ಲಿ ಉಳಿದುಕೊಳ್ಳಿ, ನರೆ ಬಿಟ್ಟ ಮೇಲೆ ಹೋಗಿ ಅಂತ ಉಪಚರಿಸುವುದು, ಶಾಲೆಗೆ ಹೋಗಿ ಸಿಕ್ಕಿಬಿದ್ದಿದ್ದ ಮಕ್ಕಳನ್ನು ಕರೆದು, ಅವರಿಗೆ ಊಟೋಪಚಾರ ನೀಡಿ, ನೆರೆ ತಗ್ಗಿದ ನಂತರ ನಿಧಾನವಾಗಿ ಹೋಗುವಿರಂತೆ ಎಂಬ ಹಿತನುಡಿ... ಎಲ್ಲಿಂದ ಬರುತ್ತದೆ ಈ ಮಾನವೀಯ ಅಂತಃಕರಣ ಎಂದವರು ಅಚ್ಚರಿ ವ್ಯಕ್ತಪಡಿಸುತ್ತಾ, ಇವುಗಳೇ ತಾನೇ ಸಾಹಿತ್ಯದಲ್ಲಿ, ಕಥಾಲೋಕದಲ್ಲಿ ಕಾಣಿಸಿಕೊಳ್ಳುವುದು. ಕಥೆ ಏನಿದ್ದರೂ ಜೀವನದ ಪ್ರತಿಯೊಂದು ಹಂತದಲ್ಲೂ ಇದೆ ಎಂದು ವಿಶ್ಲೇಷಿಸಿದರು.

ಮಗದೊಂದು ಘಟನೆ. ಆತ್ಮೀಯ ಮಿತ್ರರಾದ ಕ್ಯಾನ್ಸರ್ ವೈದ್ಯ ನಾಗರಾಜ ಹುಯಿಲಗೋಳ ಅವರ ಕ್ಲಿನಿಕ್ಕಿಗೆ ಒಬ್ಬ ವಯೋವೃದ್ಧ ಕ್ಯಾನ್ಸರ್ ರೋಗಿ ಬಂದಿದ್ದರು. ಅಲ್ಲಿಗೆ ಬರೋವರೆಲ್ಲರೂ ಮೂರ್ನಾಲ್ಕು ತಿಂಗಳ ಆಯುಷ್ಯ ಬಾಕಿ ಉಳಿದಿದ್ದ ಹಂತ ತಲುಪಿದ ಕ್ಯಾನ್ಸರ್ ರೋಗಿಗಳು. ನವೆಂಬರ್ ತಿಂಗಳಲ್ಲಿ ಬಂದ ಈ ವೃದ್ಧರು, "ಡಾಕ್ಟರ್ ಸಾಬ್.. ಜನವರಿ ತಿಂಗಳಲ್ಲಿ ನನ್ನ ಮೊಮ್ಮಗಳ ಮದುವೆ ಇದೆ. ತಬ್ ತಕ್ ಖೀಂಚೋ (ಅಲ್ಲೀವರ್ಗೆ ನನ್ನ ಪ್ರಾಣ ಉಳಿಸಿ) ನನ್ನನ್ನು ನೀವು ಎಳೀಬೇಕು..! ಆ ಮಾತನ್ನು ಕೇಳಿ ನಂಗೆ ಆಘಾತ. ಇಲ್ಲಪ್ಪಾ ನಿನಗೆ ಏನೂ ಆಗಿಲ್ಲ. ಇನ್ನೂ ಐದಾರು ವರ್ಷ ಬದುಕ್ತೀಯಾ ಎಂದರು ಡಾಕ್ಟರ್. ಅದಕ್ಕೆ ಆ ವೃದ್ಧ ಏನಂದ್ರು ಗೊತ್ತಾ..? ಇಲ್ಲ ಸಾಬ್. ನನಗೆ ಏನಾಗಿದೆ ಎಂಬುದು ನನಗೆ ಗೊತ್ತು.. ಇದು ಯಾಕಾಗಿದೆ ಎಂಬುದೂ ನನಗೆ ಗೊತ್ತು ಎಂದುತ್ತರಿಸಿದರು.

ಏನಾಗಿದೆ ಎಂದು ಗೊತ್ತಿರೋದು ಸಾಮಾನ್ಯ,. ಆದ್ರೆ ಯಾಕಾಗಿದೆ ಎಂಬುದೂ ಗೊತ್ತು ಎಂದರಲ್ಲ, ಇದು ನನ್ನನ್ನು ಯೋಚನೆಗೀಡು ಮಾಡಿತು. ಮಾತು ಮುಂದುವರಿಸಿದ ಈ ಅಜ್ಜ, "ನನಗೆ ಕ್ಯಾನ್ಸರ್ ಬಂದಿದೆ ಎಂಬುದು ಗೊತ್ತು. ಇದ್ಯಾಕೆ ಬಂತು? ನಾನು ನೀರನ್ನು ಮಾರಾಟ ಮಾಡಿದ್ದೇನೆ. ಇದರ ಪಾಪದ ಫಲ ನನ್ನನ್ನು ಸುತ್ತಿಕೊಂಡಿದೆ" ಎಂದುಬಿಟ್ಟಿದ್ದ. ಅಂದರೆ ಆತ ಆ ಕಾಲದಲ್ಲಿ ದೇಶದಲ್ಲೇ ಮೊದಲು ಬಾಟ್ಲಿ ನೀರು ಮಾರುವ ಉದ್ಯಮ ಮಾಡಿಕೊಂಡಿದ್ದ. ನೀರನ್ನು ಮಾರಾಟ ಮಾಡಬಾರದಿತ್ತು. ಮಾರಾಟ ಮಾಡಿದ ಕಾರಣದಿಂದಲೇ ನನಗೆ ಈ ಪಾಪ ಬಂದಿದೆ.. ಅದನ್ನು ನಾನು ಸಹಿಸಿಕೊಳ್ಳಲೇಬೇಕು ಎಂಬ ನಿರ್ಧಾರಕ್ಕೆ ಆ ರೋಗಿ ಬಂದಂತಿತ್ತು...

ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿ ಬಿಡುಗಡೆ ಮಾಡಿದ ಸಂದರ್ಭದ ಘಟನೆಯೊಂದನ್ನು ನೆನಪಿಸಿಕೊಂಡರವರು. ಡಾ.ರಾಜ್ ವೀರಪ್ಪನ್ ಸೆರೆಯಿಂದ ಬಂಧಮುಕ್ತಿಯಾಗುವ ಸಂದರ್ಭದಲ್ಲಿ, ಆತನೇ ರಾಜ್‌ಗೆ ಕೇಳಿದ್ದನಂತೆ, ನಿಮಗೇನು ಆಸೆಯಿದೆ? ಅಂತ. ಆಗ ರಾಜ್ ಅವರು ಹೇಳಿದ್ದು, ನೋಡಪ್ಪಾ ನಿನ್ನ ಮೀಸೆಯನ್ನೊಮ್ಮೆ ಸವರೋ ಆಸೆ ಅಂತ. ವೀರಪ್ಪನ್‌ಗೆ ಒಂದಷ್ಟು ಹೆಮ್ಮೆಯೇ ಅನ್ನಿಸ್ತು. ಅಷ್ಟು ವರ್ಷ ಬೆಳೆಸಿದ ಮೀಸೆಯಲ್ಲವೇ? ಹಾಗೆ ಡಾ.ರಾಜ್‌ಗೆ ಮೀಸೆ ಸವರಲು ಅವಕಾಶ ಮಾಡಿಕೊಟ್ಟ. ಇದು ರಾಜ್ ಅವರ ಮಕ್ಕಳ ಮನಸ್ಸಿನ ದ್ಯೋತಕ. ಆ ಮೇಲೆ, ಡಾ.ರಾಜ್ ಅವರನ್ನು ಬಿಡುಗಡೆಯಾದಾಗ ತರಂಗ ಸಂಪಾದಕ ಬಿ.ಗಣಪತಿ ಪ್ರಶ್ನೆ ಕೇಳಿದ್ದರು . "ಬಿಡುಗಡೆಯಾಗಿದ್ದು ಹೇಗನಿಸುತ್ತದೆ?" ಅದಕ್ಕೆ ರಾಜ್ ನೀಡಿದ ಉತ್ತರ- "ನನ್ನ ಬಿಡುಗಡೆಯಾಯಿತು. ವೀರಪ್ಪನ್ ಬಿಡುಗಡೆ ಯಾವಾಗ?". ಈ ಉತ್ತರ ನಿಜಕ್ಕೂ ಚಿಂತನೆಗೆ ಹಚ್ಚುವಂತಿತ್ತು. ಕೆಲವೇ ಕ್ಷಣಗಳ ಮೊದಲಿದ್ದ ಮಗುವಿನ ಮನಸ್ಸು, 10 ಸೆಕೆಂಡ್ ಅಂತರದಲ್ಲೇ ಪ್ರಬುದ್ಧ, ಮಾತೃಹೃದಯದ ಮಾತುಗಳು! ಆ ವೀರಪ್ಪನ್‌ಗೆ ಪಾಪದ ಕೂಪದಿಂದ ಮುಕ್ತಿ ದೊರೆಯುವುದು ಯಾವಾಗ ಎಂಬ ಅಂತಃಕರಣ. ಇಂಥದ್ದೊಂದು ಅಂತಃಕರಣ ಜೀವನದಲ್ಲಿ ಅತ್ಯಗತ್ಯ ಎನ್ನುತ್ತಾ ಮಾತು ಮುಗಿಸಿದರು.

ಮಾತಿನ ನಡುನಡುವೆಯೇ, ಮುಂಬಯಿಯಲ್ಲಿನ ಭಯೋತ್ಪಾದಕರ ವಿಧ್ವಂಸಕ ಕೃತ್ಯವನ್ನೂ ನೆನಪಿಸಿಕೊಂಡ ಅವರು, ನಾವಿಲ್ಲಿ ಸಂಭ್ರಮಿಸುತ್ತಿದ್ದೇವೆ. ಭದ್ರತಾ ಪಡೆಗಳವರು ನಮಗೆ ಈ ಭಯಮುಕ್ತ ವಾತಾವರಣ ದೊರಕಿಸಿಕೊಡಲು ಹೋರಾಡುತ್ತಿದ್ದಾರೆ. ನಮಗೂ ಆ ಕರಾಳ ಘಟನೆಗೂ ಸಂಬಂಧವೇ ಇಲ್ಲ ಎಂದು ಹೇಳುವಂತೆಯೇ ಇಲ್ಲ ಎಂದರು.

ಬಳಿಕ ಕಥೆಗಾರನಿಗೆ ಈ ದಿನಗಳಲ್ಲಿ ವಿಪುಲ ಅವಕಾಶಗಳಿವೆ. ಬರೆದದ್ದೆಲ್ಲ ಪ್ರಕಟವಾಗುವ ಪರಿಸ್ಥಿತಿಯಿದೆ. ಹೀಗಾಗಿ ಬರೆವಣಿಗೆಯ ಗುಣಮಟ್ಟ ಕುಸಿಯುತ್ತದೆ. ಇದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರವರು.

Share this Story:

Follow Webdunia kannada