Select Your Language

Notifications

webdunia
webdunia
webdunia
webdunia

ನುಡಿಸಿರಿ'ಯ ಮುಖ್ಯಾಂಶಗಳು

ನುಡಿಸಿರಿ'ಯ ಮುಖ್ಯಾಂಶಗಳು
, ಶುಕ್ರವಾರ, 28 ನವೆಂಬರ್ 2008 (16:28 IST)
* ಮೂಡುಬಿದರೆ ಪೇಟೆಯಿಂದ ಸಮ್ಮೇಳನ ಸ್ಥಳದವರೆಗೆ ನುಡಿಸಿರಿಯ ಬ್ಯಾನರ್ ಅಳವಡಿಸಲಾಗಿದ್ದು, ಮೂಡುಬಿದರೆ ಪರಿಸರದಲ್ಲಿ ಕನ್ನಡದ ವಾತಾವರಣ ಎದ್ದು ಕಾಣುತ್ತಿದೆ.

* ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿ ನಿಲ್ಲಿಸಲಾದ ಪಿರಮಿಡ್ ಕಂಬಗಳು ಆಕರ್ಷಕವಾಗಿವೆ. ಮೂರು ಕಂಬಗಳಲ್ಲಿ ತಲಾ ಆರು ಪಿರಮಿಡ್ ಗೋಪುರಗಳನ್ನು ಬಹುವರ್ಣಗಳಲ್ಲಿ ವಿನ್ಯಾಸಗೊಳಿಸಲಾಗಿದೆ.

* ಪ್ರವೇಶದ್ವಾರದಲ್ಲೇ ಎರಡು ತೆಂಕುತಿಟ್ಟು ಯಕ್ಷಗಾನ ವೇಷ ಶಿಲ್ಪಗಳನ್ನು ನಿರ್ಮಿಸಲಾಗಿದೆ. ಇದೇ ಮೊದಲ ಬಾರಿ ಈ ಪ್ರಯೋಗ ಮಾಡಲಾಗಿದ್ದು, ಈ ಶಿಲ್ಪಗಳು ಶಾಶ್ವತವಾಗಿರುತ್ತವೆ.

* ಪ್ರವೇಶ ದ್ವಾರದಲ್ಲಿ 6 ಬೃಹತ್ ಗಾತ್ರದ ಅಕ್ವೇರಿಯಂಗಳು ಶಾಶ್ವತನೆಲೆಯಲ್ಲಿ ನಿರ್ಮಾಣಗೊಂಡಿವೆ.

WD
* ಸುಂದರಿ ಆನಂದ ಆಳ್ವಾ ಪರಿಸರದ ತುಂಬೆಲ್ಲ ಅಲ್ಲಲ್ಲಿ ನುಡಿಮುತ್ತುಗಳ ಫಲಕಗಳನ್ನು ನೇತಾಡಿಸಲಾಗಿದೆ. ಇದರಲ್ಲಿ ಕನ್ನಡದ ಆದಿ ಕವಿಗಳಿಂದ ಹಿಡಿದು ಆಧುನಿಕ ಕವಿಗಳವರೆಗಿನ ವರೇಣ್ಯರ ನುಡಿಗುಚ್ಛಗಳು ಕಂಗೊಳಿಸುತ್ತಿವೆ.

ಯಕ್ಷಗಾನದ ದಿಗಿಣ, ಮಂಡಿಕುಣಿತ

ನುಡಿಸಿರಿ ಸಮ್ಮೇಳನದಲ್ಲಿ ಎದ್ದುಕಂಡಿದ್ದು ಯಕ್ಷಗಾನ ವೈಭವ. ಇಡೀ ಪರಿಸರದಲ್ಲಿ ನಾನಾ ಕಡೆ ಯಕ್ಷಗಾನ ಮುಖವರ್ಣಿಕೆಗಳು ಎದ್ದು ಕಾಣುತ್ತಿದ್ದರೆ, ಕಾರ್ಯಕ್ರಮದ ಆರಂಭದಲ್ಲೂ ಯಕ್ಷಗಾನ ಮೇಳವಿಸಿತು. ಉದ್ಘಾಟನೆಗೆ ಮುನ್ನ ಬಡಗು ತಿಟ್ಟು ಮತ್ತು ತೆಂಕು ತಿಟ್ಟು ಎರಡೂ ಪ್ರಕಾರಗಳ ಪ್ರದರ್ಶನ ಮುದ ನೀಡಿತು. ಬಡಗುತಿಟ್ಟಿನ ಮಂಡಿ ಕುಣಿತ ಮತ್ತು ತೆಂಕು ತಿಟ್ಟಿನ ಧಿಗಿಣ ಸಭಾಸದರನ್ನು ರೋಮಾಂಚನಗೊಳಿಸಿತು. ಉದ್ಘಾಟನೆ ಸಮಾರಂಭದ ವಂದನಾರ್ಪಣೆ ಕೂಡಾ ಯಕ್ಷಗಾನ ಭಾಗವತಿಕೆಯೊಂದಿಗೆ ಸಂಪನ್ನಗೊಂಡಿತು. ವಿಶೇಷವೆಂದರೆ ಈ ಭಾಗವತಿಕೆಯಲ್ಲಿ ಸಮ್ಮೇಳನದ ಅಧ್ಯಕ್ಷ, ಉದ್ಘಾಟಕರು ಮತ್ತು ಎಲ್ಲ ಅತಿಥಿಗಳಿಗೆ ಯಕ್ಷಗಾನ ಶೈಲಿಯಲ್ಲೇ ವಂದನಾರ್ಪಣೆ ಸಲ್ಲಿಸಲಾಯಿತು.

ಮೆರೆದ ತುಳುನಾಡು

ನುಡಿಸಿರಿ ಸಮ್ಮೇಳನ ಕನ್ನಡ ಸಾಹಿತ್ಯದ ಪರ್ವವಾಗಿದ್ದರೂ ಇದರೊಂದಿಗೆ ಸಮಾನವಾಗಿ ಮಿಳಿತಗೊಂಡಿದ್ದು ತುಳುನಾಡಿನ ಸಾಂಸ್ಕೃತಿಕ ವೈವಿಧ್ಯ. ಮೆರವಣಿಗೆ, ಸಭಾ ಕಾರ್ಯಕ್ರಮ ಇತ್ಯಾದಿಗಳಲ್ಲಿ ತುಳುನಾಡಿನ ಜನಪದೀಯ ಅಂಶಗಳು ಎದ್ದುಕಂಡವು. ವೇದಿಕೆಯಲ್ಲಿದ್ದ ಆರು ಅತಿಥಿಗಳು ಕೂಡಾ ತುಳುನಾಡು ಶೈಲಿಯ ಉಡುಪು ಧರಿಸಿದ್ದರು. ಬಿಳಿ ಅಂಗಿ, ಬಿಳಿ ಕಚ್ಚೆ ಮತ್ತು ಬಿಳಿ ಮುಂಡಾಸಿನಲ್ಲಿ ಕಂಗೊಳಿಸುತ್ತಿದ್ದರು.

webdunia
WD

ಭತ್ತದ ತೆನೆಗೆ ಹಾಲೆರೆದ ಅತಿಥಿಗಳು

ಸಮ್ಮೇಳನದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕವೇ ಮಾಡಿದ್ದರೂ ಅದಕ್ಕೂ ಮೊದಲು ವಿಶಿಷ್ಟ ಶೈಲಿಯ ಬೊಳ್ಳಿಗಿಂಡ್ಯೆ ವಿಧಾನ ಎಲ್ಲರ ಗಮನ ಸೆಳೆಯಿತು. "ಕಳಸಿಗೆ" ಮೇಲೆ ಇಡಲಾಗಿದ್ದ ಭತ್ತದ ತೆನೆಯ ಮೇಲೆ ಬೊಳ್ಳಿ ಗಿಂಡ್ಯೆ (ಬೆಳ್ಳಿಯ ಗಿಂಡಿ)ಯಿಂದ ಎಲ್ಲ ಅತಿಥಿಗಳು ಹಾಲು ಎರೆಯುವ ಮೂಲಕ ವಿಧ್ಯುಕ್ತ ಉದ್ಘಾಟನೆ ಮಾಡಲಾಯಿತು. ಸಮೃದ್ಧಿಯ ಸಂಕೇತವಾಗಿ ಈ ವಿಧಾನ ಅನುಸರಿಸಲಾಗಿದ್ದು, ಇದು ಪುರಾತನ ತುಳು ಸಂಪ್ರದಾಯದ ಒಂದು ಭಾಗವಾಗಿದೆ.

ಛತ್ರಧಾರಿ ತರಳೆಯರು

ರತ್ನಾಕರ ವರ್ಣಿ ವೇದಿಕೆಯಲ್ಲಿ ವಿಶಿಷ್ಟತೆಯ ಛಾಪು ಮೂಡಿಸಿದ್ದು ಬೆಳ್ಗೊಡೆ ಹಿಡಿದ ಬಾಲೆಯರು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಚೆನ್ನವೀರ ಕಣವಿ ಅವರು ಆಸೀನರಾಗಿದ್ದ ಪೀಠದ ಹಿಂದೆ ಅವರಿಗೆ ಬೆಳ್ಗೊಡೆ ಹಿಡಿದು ನಿಲ್ಲುವ ಪದ್ಧತಿ ಸಮಾರಂಭದುದ್ದಕ್ಕೂ ಮುಂದುವರಿಯಿತು. ಇದಕ್ಕೆಂದೇ ನಾಲ್ಕು ಯುವತಿಯರನ್ನು ಸಜ್ಜುಗೊಳಿಸಲಾಗಿತ್ತು. ಪ್ರತಿಯೊಬ್ಬರು ತಲಾ ಕಾಲು ಗಂಟೆಯಂತೆ ಪಾಳಿಯಲ್ಲಿ ಬಂದು ಬೆಳ್ಗೊಡೆ ಹಿಡಿದು ನಿಲ್ಲುತ್ತಿದ್ದರು.

ಮರಳಿ ಯತ್ನವ ಮಾಡು...
ವೇದಿಕೆಯಲ್ಲಿದ್ದ ಎಲ್ಲ ಆರು ಅಭ್ಯಾಗತರಿಗೆ ತುಳುನಾಡಿನ ಸಾಂಪ್ರದಾಯಿಕ ಶೈಲಿಯ ಮುಂಡಾಸು ತೊಡಿಸಲಾಗಿತ್ತು. ಎಲ್ಲರ ತಲೆಯಲ್ಲೂ ಅದು ಭದ್ರವಾಗಿ ಸುತ್ತಿಕೊಂಡಿದ್ದರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಅವರ ತಲೆಗೆ ಮಾತ್ರ ಮುಂಡಾಸು ಒಗ್ಗುತ್ತಿರಲಿಲ್ಲ. ಅದು ಆಗ ಕಳಚಿಕೊಳ್ಳುತ್ತಿದ್ದರೆ ನಗು ನಗುತ್ತಲೇ ಮರಳಿ ಯತ್ನ ಮಾಡುತ್ತಿದ್ದರು ನಲ್ಲೂರು ಪ್ರಸಾದ್.

Share this Story:

Follow Webdunia kannada