Select Your Language

Notifications

webdunia
webdunia
webdunia
webdunia

ನುಡಿಸಿರಿ ದಿನ-2: ವೈವಿಧ್ಯಮಯ ಕಾರ್ಯಕ್ರಮಗಳ ಸಂಗಮ

ನುಡಿಸಿರಿ ದಿನ-2: ವೈವಿಧ್ಯಮಯ ಕಾರ್ಯಕ್ರಮಗಳ ಸಂಗಮ
ಮೂಡುಬಿದಿರೆ , ಶನಿವಾರ, 29 ನವೆಂಬರ್ 2008 (19:00 IST)
ನುಡಿಸಿರಿ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ಬೆಳಗ್ಗೆ ಉದಯರಾಗದಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳ ಆರಂಭ.

5.30ಕ್ಕೆ ಧಾರವಾಡದ ಗಾಯಕ ವೆಂಕಟೇಶ್ ಕುಮಾರ್ ಅವರು ಹಿಂದೂಸ್ಥಾನಿ ಗಾಯನ ಪ್ರಸ್ತುತಪಡಿಸಿ ನೆರೆದಿದ್ದ ಸಭಿಕರ ಮನಮುದಗೊಳಿಸಿದರು. ಬಳಿಕ ಸಮ್ಮೇಳನಾಧ್ಯಕ್ಷ ಚೆನ್ನವೀರ ಕಣವಿ ಅವರೊಂದಿಗೆ ಸಾರ್ವಜನಿಕ ಸಂವಾದ ಅರ್ಥಪೂರ್ಣವಾಗಿ ಮೂಡಿಬಂತು. ಕಾರ್ಕಳದ ಸುರಮಣಿ ಮಹಾಲಕ್ಷ್ಮೀ ಶೆಣೈ ಅವರ ಭಾವಲಹರಿ ಪ್ರೇಕ್ಷಕರನ್ನು ಸಂಗೀತದ ಹೊಸ ಲೋಕಕ್ಕೆ ಕರೆದೊಯ್ದಿತು.

ವಾಸುದೇವ ನಾಡಿಗ್ ಕವಿಸಮಯ-ಕವಿನಮನ ನಡೆಸಿಕೊಟ್ಟ ಬೆನ್ನಲ್ಲಿ ನಡೆದ "ಕನ್ನಡ ಸಾಹಿತ್ಯ: ಶಕ್ತಿ ಮತ್ತು ವ್ಯಾಪ್ತಿ' ಅಡಿಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಅವರು "ಪ್ರಾಚೀನ ಕನ್ನಡ ಸಾಹಿತ್ಯ:ಪರಂಪರೆ, ಪ್ರಕಾರಗಳು ಮತ್ತು ಮುಖಾಮುಖಿ" ವಿಷಯದಲ್ಲಿ ಹಾಗೂ ಮತ್ತು ಡಾ.ಅರವಿಂದ ಮಾಲಗತ್ತಿಯವರು "ಆಧುನಿಕ ಸಾಹಿತ್ಯ: ಹೊಸ ಸಂವೇದನೆಗಳು" ವಿಷಯದಲ್ಲಿ ವಿಚಾರಪ್ರಚೋದಕ ಪ್ರಬಂಧ ಮಂಡಿಸಿದರು.

'ಕಥಾಸಮಯ' ಕಾರ್ಯಕ್ರಮದಲ್ಲಿ ಕಥೆಗಾರ್ತಿ ವೈದೇಹಿ ಅವರು ನಡೆಸಿಕೊಟ್ಟ ಕಲಾಪ ಇಡೀ ಸದನದ ಮನ ಕಲಕಿತು. ದೇಶ ಪ್ರಸ್ತುತ ಎದುರಿಸುತ್ತಿರುವ ಭಯೋತ್ಪಾದನೆ, ನಾಡಿನ ಜನತೆಯಲ್ಲಿ ತಾಂಡವವಾಡುತ್ತಿರುವ ಭಯದ ಚಿತ್ರಣವನ್ನು ಹಸಿ ಹಸಿಯಾಗಿ ಸಭೆಯ ಮುಂದಿಟ್ಟ ವೈದೇಹಿ ಅಂಥದೇ ಒಂದು ಕಥೆಯನ್ನು ಪ್ರಸ್ತುತಪಡಿಸಿದರು.

ಡಾ.ಅರವಿಂದ ಮಾಲಗತ್ತಿಯವರ ಪತ್ನಿ ಧರಣೀದೇವಿ ಮಾಲಗತ್ತಿಯವರು 'ಕವಿಸಮಯ' ಪ್ರಸ್ತುತಪಡಿಸಿದರು. ಪ್ರೊ.ಎಂ.ರಾಮಚಂದ್ರ ಅವರು "ಜಿ.ಪಿ. ರಾಜರತ್ನಂ ನೆನಪು' ಸ್ಮರಣೆ ಮಾಡಿದರು. ಭೋಜನದ ಬಳಿಕದ ಕವಿಸಯಮದಲ್ಲಿ ಡಾ. ಹೇಮಾ ಪಟ್ಟಣಶೆಟ್ಟಿ ಕವನಗಳಿಂದ ಗಮನ ಸೆಳೆದರೆ, ಕಥೆಗಾರ ಕುಂ. ವೀರಭದ್ರಪ್ಪ 'ಕಥಾಸಮಯ' ನಡೆಸಿಕೊಟ್ಟರು. ಡಾ. ತಾಳ್ತಜೆ ವಸಂತ ಕುಮಾರ್ ಅವರು ವಿ.ಕೃ. ಗೋಕಾಕ್ ಅವರನ್ನು ಸ್ಮರಿಸಿದರು.

Share this Story:

Follow Webdunia kannada