Select Your Language

Notifications

webdunia
webdunia
webdunia
webdunia

ನಮಗೆ ಬೇಕಿರುವುದು ಕನ್ನಡೀಕರಣ: ಚಂದ್ರು

ನಮಗೆ ಬೇಕಿರುವುದು ಕನ್ನಡೀಕರಣ: ಚಂದ್ರು
ಮೂಡುಬಿದರೆ , ಸೋಮವಾರ, 1 ಡಿಸೆಂಬರ್ 2008 (09:44 IST)
"ಕರ್ನಾಟಕದ ಏಕೀಕರಣ ನಡೆದು ಐವತ್ತು ವರ್ಷ ಕಳೆದರೂ ಇನ್ನೂ ಕನ್ನಡದ ಮೂಲಭೂತ ಆವಶ್ಯಕತೆಗಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ಇಡೀ ದೇಶದಲ್ಲಿ ನಮ್ಮಲ್ಲಿ ಮಾತ್ರ ಇರುವಂಥ ಸನ್ನಿವೇಶ. ನಮಗೀಗ ಕನ್ನಡದ ರಾವಣೀಕರಣವೂ ಬೇಕಾಗಿಲ್ಲ, ದುರ್ಯೋಧನೀಕರಣವೂ ಬೇಕಾಗಿಲ್ಲ. ನಮಗೆ ಬೇಕಾಗಿರುವುದು ಕನ್ನಡೀಕರಣ" ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ 'ಮುಖ್ಯಮಂತ್ರಿ' ಚಂದ್ರು ನುಡಿದರು.

ಅವರು ಇಲ್ಲಿನ ವಿದ್ಯಾಗಿರಿಯಲ್ಲಿ ನಡೆದ ಮೂರು ದಿನಗಳ ಕಾಲ ಆಳ್ವಾಸ್ ನುಡಿಸಿರಿಯಲ್ಲಿ ಭಾನುವಾರ ಸಂಜೆ ಸಮಾರೋಪ ಭಾಷಣ ಮಾಡುತ್ತಿದ್ದರು.
WD

ಕನ್ನಡಿಗರು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುತ್ತಿರುವುದು ತಪ್ಪಲ್ಲ ಎಂದು ಹೇಳಿದ ಚಂದ್ರು, ಆದರೆ ಹೋರಾಟ ಸರಿಯಾದ ದಿಕ್ಕಿನಲ್ಲಿ ನಡೆದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ರಾಜಕೀಯ ಪಕ್ಷಗಳು ಮತಬ್ಯಾಂಕ್ ಉಳಿಸಿಕೊಳ್ಳುವುದಕ್ಕಾಗಿ ಕನ್ನಡದ ಹಿತಾಸಕ್ತಿಯನ್ನು ಬಲಿ ಕೊಡಬಾರದು. ಕೇಂದ್ರ ಸರಕಾರ ಸಮಗ್ರ ಶಿಕ್ಷಣ ನೀತಿಯೊಂದನ್ನು ಜಾರಿಗೆ ತರಬೇಕು ಎಂದರು. 2009ನ್ನು ಕನ್ನಡ ಅನುಷ್ಠಾನ ಜಾಗೃತಿ ವರ್ಷವನ್ನಾಗಿ ಆಚರಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಕನ್ನಡ ನಾಮಫಲಕ ಕಡ್ಡಾಯ
ಜನವರಿ ಒಂದರ ನಂತರ ಕರ್ನಾಟಕದ ಯಾವುದೇ ಭಾಗದಲ್ಲಿ ನಾಮಫಲಕಗಳು ಕನ್ನಡದಲ್ಲಿ ಇರುವುದಿಲ್ಲವೋ ಅಂಥ ಸಂಸ್ಥೆಗಳು, ಅಂಗಡಿ, ಹೋಟೆಲ್, ವಾಣಿಜ್ಯ ಮಳಿಗೆಗಳ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಂದ್ರು ಎಚ್ಚರಿಸಿದ್ದಾರೆ.

ನಾಮಫಲಕ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದ ಅವರು ತ್ರಿಭಾಷಾ ಸೂತ್ರವನ್ನು ನಾಮಫಲಕದಲ್ಲಿ ಅನುಸರಿಸಬಹುದು. ಆದರೆ ಕನ್ನಡದ ಹೆಸರು ಮಾತ್ರ ದೊಡ್ಡದಾಗಿ ಮೊದಲ ಸಾಲಿನಲ್ಲಿ ಇರಲೇಬೇಕು. ಇದಕ್ಕೆ ತಪ್ಪಿದರೆ ಹತ್ತು ಸಾವಿರ ರೂಪಾಯಿ ದಂಡ ವಿಧಿಸುವ ಪ್ರಸ್ತಾಪವನ್ನು ಸರಕಾರದ ಮುಂದಿಟ್ಟಿದ್ದೇನೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡಾ ತಾತ್ವಿಕವಾಗಿ ಒಪ್ಪಿದ್ದಾರೆ. ಎರಡನೇ ಬಾರಿ ಸಿಕ್ಕಿಬಿದ್ದವರಿಗೆ ದಂಡದ ಪ್ರಮಾಣ ಜಾಸ್ತಿ ಮಾಡಲಾಗುವುದು ಮಾತ್ರವಲ್ಲದೆ ಈ ಚಾಳಿ ಮತ್ತೂ ಮುಂದುವರಿದರೆ ಅಂಥವರ ವ್ಯವಹಾರ ಪರವಾನಗಿಯನ್ನೇ ರದ್ದು ಮಾಡುವಂಥ ಕಠಿಣ ಕ್ರಮಕ್ಕೆ ಸರಕಾರ ಮುಂದಾಗಲಿದೆ ಎಂದು ಎಚ್ಚರಿಸಿದರು.

ಅಧಿಕಾರಿಗಳ ಅಸಡ್ಡೆ
ಕನ್ನಡವನ್ನು ಆಡಳಿತದಲ್ಲಿ ಸಂಪೂರ್ಣವಾಗಿ ಜಾರಿ ಮಾಡುವುದಕ್ಕೆ ಸಂಬಂಧಿಸಿದ ಕಾನೂನು ಇದ್ದರೂ ಇನ್ನೂ ಅದು ಪೂರ್ತಿಯಾಗಿ ಜಾರಿಯಾಗಿಲ್ಲ. ಇದಕ್ಕೆ ಅಧಿಕಾರಿಗಳ ಅಸಡ್ಡೆಯೇ ಕಾರಣ ಎಂದು ಆರೋಪಿಸಿದ ಅವರು, ಇಂಥ ಅಧಿಕಾರಿಗಳನ್ನು ಹುದ್ದೆಯಿಂದ ವಜಾ ಮಾಡುವ ಕಟ್ಟುನಿಟ್ಟಿನ ಕಾನೂನು ಅಗತ್ಯವಿದೆ ಎಂದು ಒತ್ತಿ ಹೇಳಿದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕೆಂಬ ಸರೋಜಿನಿ ಮಹಿಷಿ ವರದಿ ಬಂದು 23 ವರ್ಷಗಳೇ ಸಂದಿವೆ. ಇದು ಕಾನೂನು ರೂಪ ಪಡೆದು ದಶಕಗಳೇ ಕಳೆದಿವೆ. ಆದರೂ ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಬೆಂಗಳೂರಿನ ಪರಿಸ್ಥಿತಿ ಹೇಗಿದೆ ಎಂದರೆ ಅಲ್ಲಿ 68 ಶೇಕಡಾ ಮಂದಿ ಕನ್ನಡೇತರ ಭಾಷೆಯವರಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಕನ್ನಡಕ್ಕೆ ಮಾನ್ಯತೆ, ಗೌರವ ನೀಡುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬೆಂಗಳೂರು ಕೇಂದ್ರಾಡಳಿತ ಪ್ರದೇಶದ ಸ್ವರೂಪ ಪಡೆದರೂ ಅಚ್ಚರಿಯಿಲ್ಲ.

ಕನ್ನಡೀಕರಣಕ್ಕಾಗಿ ಹೋರಾಟ ಮಾಡಲೇಬೇಕಾಗಿದೆ. ಕರ್ನಾಟಕದ ಬೇರೆ ಬೇರೆ ಕಡೆ ಬೇರೆ ಬೇರೆ ಸಮಸ್ಯೆ ಇದೆ. ಹಾಗೆಂದು ನಾವು ಕನ್ನಡಿಗರು ದುರಭಿಮಾನಿಗಳಾಗುವುದು ಬೇಡ. ಆದರೆ ನಿರಭಿಮಾನಿಗಳಾಗಿ ಇರುವುದಾದರೂ ಯಾತಕ್ಕೆ ಎಂದು ಖಾರವಾಗಿ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.


Share this Story:

Follow Webdunia kannada