Select Your Language

Notifications

webdunia
webdunia
webdunia
webdunia

ಎಲ್ಲೆಡೆ ಭಯಾತಂಕ, ಅದೇ ಕಥೆಗಳ ಪ್ರದಾನ ಕೇಂದ್ರ: ವೈದೇಹಿ

ಎಲ್ಲೆಡೆ ಭಯಾತಂಕ, ಅದೇ ಕಥೆಗಳ ಪ್ರದಾನ ಕೇಂದ್ರ: ವೈದೇಹಿ
ಮೂಡುಬಿದಿರೆ , ಶನಿವಾರ, 29 ನವೆಂಬರ್ 2008 (19:12 IST)
ಶಿವಾನಿ

ಏನಾಗಿದೆ ನಮ್ಮ ದೇಶದ ಕಥೆ.. ಸ್ವಲ್ಪ ಅಲೋಚನೆ ಮಾಡಿ ನೋಡೋಣ.. ನಾವೀಗ ಏನು ಮಾಡಬೇಕಾಗಿದೆ..? ನಮ್ಮ ದೇಶದ ಕಥೆಯನ್ನು ಮರು ಕಟ್ಟಬೇಕಾಗಿದೆ. ಆದರೆ ಹೇಗೆ ಕಟ್ಟಲಿ.. ಯಾವ ರೀತಿ ಕಟ್ಟಲಿ..? ಅದೇ ನಮಗೆ ಅರ್ಥವಾಗದ ಸಂಗತಿ... ಎಂದು ನುಡಿದವರು ಕಥೆಗಾರ್ತಿ ವೈದೇಹಿ.

ಆಗ ವ್ಯಾಸರಾಯ ಸಭಾಂಗಣದಲ್ಲಿ ನೆರೆದಿದ್ದ ಸಭಿಕರ ಮನಸ್ಸಿನಲ್ಲಿ ಅನಾಯಾಸವಾಗಿ ಹರಿದಾಡಿದ್ದು ಭಯೋತ್ಪಾದನೆಯ ಕುಲುಮೆಯಲ್ಲಿ ಬೇಯುತ್ತಿರುವ ನಮ್ಮ ದೇಶದ ಕಥೆ.. ಬಹುಶಃ ವೈದೇಹಿ ಅವರ ಮನಸ್ಸನ್ನು ಕೂಡಾ ಇದು ಆಳವಾಗಿ ತಟ್ಟಿದೆ. ಕಥಾ ಸಮಯದಲ್ಲಿ ಕಥೆಯ ಬಗ್ಗೆ, ಕಥೆಗಾರ್ತಿಯ ಬಗ್ಗೆ ಮಾತನಾಡಲು ಬಂದವರು ದೇಶದ ಕಥೆಯ ಬಗ್ಗೆ ಮಮ್ಮಲ ಮರುಗಿದರು.

ನಮ್ಮ ಮುಂದೆ ಇಂದು ದೊಡ್ಡ ಸವಾಲಿದೆ. ಬರೀ ಹಿಂಸೆ, ಭಯ, ಆತಂಕ. ಎಲ್ಲಿ ನೋಡಿದರೂ ಬರೀ ಭಯ ಬಿಟ್ಟರೆ ಬೇರೇನೂ ಕಾಣುತ್ತಿಲ್ಲ. ಭಯವೇ ನಮ್ಮ ಕಥೆಗಳ ಪ್ರಧಾನಕೇಂದ್ರವಾಗಿ ಬಿಟ್ಟಿದೆ. ಭಯವೇ ಇಂದು ನಮ್ಮನ್ನು ಆಳುತ್ತಿದೆ. ವೈಯಕ್ತಿಕ ಭಯ, ಸಮುದಾಯದ ಭಯ, ಮತೀಯವಾದದ ಭಯ, ಹಿಂಸೆಯ ಬಗ್ಗೆ ಎಷ್ಟು ಕಥೆ ಬರೆದರೂ ನನಗೆ ಸಾಕಾಗುತ್ತಿಲ್ಲ. ಅದಕ್ಕೆ ಈಗ ಮತ್ತೊಂದು ಕಥೆ ಬರೆದಿದ್ದೇನೆ "ಅಮ್ಮಚ್ಚಿ' ಅಂತ. ಆದರೆ ಅದೂ ನಂಗೆ ಸಾಕಾಗಲ್ಲ.. ಇನ್ನೂ ಬರೆಯಬೇಕೆನಿಸುತ್ತದೆ. ಯಾಕೆಂದರೆ ಹಿಂಸೆ ನನ್ನನ್ನು ಅಷ್ಟು ಕಾಡುತ್ತಿದೆ..' ಎಂದರು ವೈದೇಹಿ.

ಬಳಿಕ ವೈದೇಹಿ "ಅಮ್ಮಚ್ಚಿ" ಕಥೆ ಓದಿದರು. ತಂದೆಯಿಲ್ಲದೆ, ತಾಯಿಯೊಂದಿಗೆ ವಾಸಿಸುವ ತರುಣಿ ಅಮ್ಮಚ್ಚಿ. ಅಪ್ಪನಿಲ್ಲದ ಮನೆಗೆ ಬಂದು ನಿಂತ ವೆಂಕಪ್ಪಯ್ಯ ನಿಧಾನವಾಗಿ ಮನೆಗೆ ಯಜಮಾನನಾಗಿದ್ದು ಮಾತ್ರವಲ್ಲ.. ಅಮ್ಮಚ್ಚಿಗೂ ಯಜಮಾನನಾಗಲು ಯತ್ನಿಸಿದ್ದು.. ಆಕೆಯ ಎಲ್ಲ ಸ್ವಾತಂತ್ರ್ಯ ಕಸಿದುಕೊಳ್ಳಲು ಮುಂದಾಗಿದ್ದು.. ಇದರ ವಿರುದ್ಧ ಆಕೆ ಬಂಡೆದ್ದಿದ್ದು.. ಹೀಗೆ ಮುಂದುವರಿಯುತ್ತದೆ ಆ ಕಥೆ. ಬಂಟ್ವಾಳ ಭಾಗದ ಕೋಟ ಕನ್ನಡ ಭಾಷಿಕ ಸಮುದಾಯದ ಪಾತ್ರಗಳು ಇದಾಗಿದ್ದು, ಆ ಭಾಷೆಯಲ್ಲಿ ತುಳು ಪ್ರಭಾವ ಬೀರಿದ್ದು ಕಥೆಯಲ್ಲಿ ಎದ್ದು ಕಾಣುತ್ತದೆ.

ನನ್ನ ಕಥೆಗಳು ಸ್ತ್ರೀ ಪ್ರಧಾನ ನಿಜ. ಆದರೆ ಇದು ಕೇವಲ ಹೆಣ್ಣೊಬ್ಬಳ ಕಥೆಯಲ್ಲ. ಇಲ್ಲಿ ಹಿಂಸೆಯ ವಿವಿಧ ಮುಖಗಳನ್ನು ಅನಾವರಣ ಮಾಡಿದ್ದೇನೆ. ಇವತ್ತು ಪರಿಸ್ಥಿತಿ ಹೇಗಿದೆ ಎಂದರೆ ಮನೆಯಲ್ಲಿ ಹೆಂಗಸರು ಒಬ್ಬಂಟಿಯಾಗಿಯೇ ಇರುವಂತೆಯೇ ಇಲ್ಲ ಎಂಬಂತಾಗಿದೆ. ಈಗೀಗ ಗಂಡಸರಿಗೂ ಆ ಧೈರ್ಯ ಇಲ್ಲ.. ಎಂದು ಹಿಂಸಾಲೋಕದ ಕಟು ವಾಸ್ತವ ತೆರೆದಿಟ್ಟರು ವೈದೇಹಿ. ವಾಸ್ತವವು ಕಥೆಗಾರನನ್ನು ಹೇಗೆ ತಟ್ಟುತ್ತದೆ ಎಂಬುದು ಅವರ ಮಾತಿನಲ್ಲಿ ಸ್ಪಷ್ಟವಾಗಿತ್ತು.

Share this Story:

Follow Webdunia kannada