Select Your Language

Notifications

webdunia
webdunia
webdunia
webdunia

ನಾ ಪಾಸ್ ಮಾಡಿಸೆಂದೆ, ಅಪ್ಪ ಟಾಪರ್ ಮಾಡಿಸಿಬಿಟ್ಟರು

ನಾ ಪಾಸ್ ಮಾಡಿಸೆಂದೆ, ಅಪ್ಪ ಟಾಪರ್ ಮಾಡಿಸಿಬಿಟ್ಟರು
ಪಾಟ್ಣಾ , ಗುರುವಾರ, 30 ಜೂನ್ 2016 (11:54 IST)
ನಾನು ಪಾಸ್ ಮಾಡಿಸೆಂದೆ, ಅಪ್ಪ ಟಾಪರ್ ಮಾಡಿಸಿಬಿಟ್ಟರು, ಟಾಪರ್ ಎಂಬ ಹೆಗ್ಗಳಿಕೆಗೆ ನಾನು ಅರ್ಹಳಲ್ಲ, ಬಿಹಾರ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಟಾಪರ್ ಎನ್ನಿಸಿಕೊಂಡ ರುಬಿ ತನಿಖಾಧಿಕಾರಿಗಳ ಮುಂದೆ ಬಿಚ್ಚಿಟ್ಟ ಸತ್ಯವಿದು.
 
ನಿಮಗೆ ಬಿಹಾರ್ ಪಿಯುಸಿ ಫಲಿತಾಂಶ ಸೃಷ್ಟಿಸಿದ ವಿವಾದದ ಬಗ್ಗೆ ಗೊತ್ತಿರಬಹುದು. ಪರೀಕ್ಷೆಯಲ್ಲಿ ಟಾಪರ್‌ ಆದ ವಿದ್ಯಾರ್ಥಿನಿಯೋರ್ವಳು ಸರಳ ಪ್ರಶ್ನೆಗೆ ಉತ್ತರಿಸಲು ಅಸರ್ಥಳಾದಾಗ ದೊಡ್ಡ ಅಕ್ರಮ ಬೆಳಕಿಗೆ ಬಂದಿತ್ತು. ಟಾಪರ್‌ಗಳಿಗೆ ಮರು ಪರೀಕ್ಷೆಯನ್ನು ಸಹ ನಡೆಸಲಾಗಿತ್ತು. ಆದರೆ ಕಲಾ ವಿಭಾಗದಲ್ಲಿ ಟಾಪರ್ ಎನಿಸಿಕೊಂಡಿದ್ದ, ಸಂಪೂರ್ಣ ಪ್ರಕರಣ ಹೊರ ಬರಲು ಕಾರಣವಾಗಿದ್ದ ರುಬಿ ರಾಯ್ ಅನಾರೋಗ್ಯದ ಕಾರಣ ನೀಡಿ ಮರುಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದಳು. ಕೊನೆಗೂ ಪರೀಕ್ಷೆಗೆ ಹಾಜರಾದ ಅವಳು ಬರೆದ ಉತ್ತರ ಪತ್ರಿಕೆ ಸಂಪೂರ್ಣ ರಾಜ್ಯಕ್ಕೆ ಆಘಾತವನ್ನು ತಂದೊಡ್ಡಿತ್ತು. ಆತಂಕಕ್ಕೆ ದೂಡಿತ್ತು.
 
ಮರುಪರೀಕ್ಷೆ  ಅಕ್ರಮ ಸಾಬೀತಾಗಿದ್ದು ವಿಶೇಷ ತನಿಖಾ ದಳದಿಂದ ಬಂಧನಕ್ಕೊಳಗಾಗಿದ್ದಳು. ಆ ಸಂದರ್ಭದಲ್ಲಿ ಆಕೆ ತಾನು ಟಾಪರ್ ಆಗಿರುವುದರ ಹಿಂದಿನ ರಹಸ್ಯವನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿದ್ದಾಳೆ. "ನಾನು ಪರೀಕ್ಷೆಯಲ್ಲಿ ಟಾಪರ್ ಆಗಲು ಬಯಸಿರಲಿಲ್ಲ. ಕೇವಲ ತೇರ್ಗಡೆಯಾಗಬೇಕೆಂದು ಬಯಸಿದ್ದೆ. ಅಪ್ಪ ಹೇಗಾದರೂ ಪಾಸ್ ಮಾಡಿಸಿ ಎಂದು ಹೇಳಿದ್ದೆ. ಆದರೆ ಅವರು ಟಾಪರ್ ಮಾಡಿಸಿಬಿಟ್ಟರು" ಎಂದಾಕೆ ಹೇಳಿದ್ದಾಳೆ. 
 
ನಾನು ಟಾಪರ್ ಆಗಲು ಅರ್ಹಳಲ್ಲ ಎಂದಾಕೆ ನೇರವಾಗಿ ಹೇಳಿದ್ದಾಳೆ ಎಂದು ಪಾಟ್ಣಾದ ವಿಶೇಷ ಪೊಲೀಸ್ ಅಧೀಕ್ಷಕ( ಎಸ್ಐಟಿ ನೇತೃತ್ವ ವಹಿಸಿರುವ ಅಧಿಕಾರಿ) ಮನು ಮಹಾರಾಜ್ ತಿಳಿಸಿದ್ದಾರೆ. 
 
ದ್ವಿತೀಯ ದರ್ಜೆಯಲ್ಲಿ ಪಾಸಾದರೆ ಸಾಕಂದಿದ್ದೆ. ನನ್ನನ್ನು ಅಕ್ರಮವಾಗಿ ಟಾಪರ್ ಮಾಡಿಸಿದ್ದಕ್ಕೆ ಪೋಷಕರು ಮತ್ತು ವಿಷ್ಣು ರಾಯ್ ಕಾಲೇಜು ಪ್ರಾಚಾರ್ಯ ಬಚ್ಚಾ ರಾಯ್ ಅವರೇ ಜವಾಬ್ದಾರರಾಗಿದ್ದಾರೆ ಎಂದಾಕೆ ಆರೋಪಿಸಿದ್ದಾಳೆ. 
 
ಏತನ್ಮಧ್ಯೆ ಉಳಿದ ಟಾಪರ್‌ಗಳು ಯಶಸ್ವಿಯಾಗಿ ತಮ್ಮ ಮರುಪರೀಕ್ಷೆಯನ್ನು ಪೂರೈಸಿದ್ದಾರೆ. 14 ಜನ ಪರಿಣಿತರ ತಂಡ ಅವರನ್ನು ಪರೀಕ್ಷೆಗೊಳಪಡಿಸಿತ್ತು. 
 
ಬಿಹಾರ ಶಾಲಾ ಪರೀಕ್ಷಾ ಮಂಡಳಿ (BSEB) ವೈಶಾಲಿ ಜಿಲ್ಲೆಯಲ್ಲಿರುವ ವಿಷ್ಣು ರಾಯ್ ( ರೂಬಿ ಓದಿದ ಕಾಲೇಜು) ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸಿದೆ.
 
ಬಿಹಾರದ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶ ಸಂಪೂರ್ಣ ದೇಶದಾದ್ಯಂತ ಸುದ್ದಿಯಾಗಿತ್ತು.ಆದರೆ ಅದು ಪ್ರಖ್ಯಾತಿಯಲ್ಲ. ಕುಖ್ಯಾತಿ. ಟಾಪರ್ ವಿದ್ಯಾರ್ಥಿನಿಯೊರ್ವಳು ರಾಜ್ಯಶಾಸ್ತ್ರ ಎಂದರೇನು ಎಂಬ ಪ್ರಶ್ನೆಗೆ ಉತ್ತರಿಸಲು ಅಸಮರ್ಥಳಾದಾಗ ಪರೀಕ್ಷೆಯಲ್ಲಿ ಭಾರಿ ಅಕ್ರಮವಾಗಿದೆ ಎಂಬುದು ಹೊರಬಿದ್ದಿತ್ತು.
 
ರಾಜ್ಯಶಾಸ್ತ್ರ ಎಂದರೇನು ಎಂದು ಪ್ರಶ್ನಿಸಲಾಗಿ ರುಬಿ ಪೊಲಿಟಿಕಲ್ ಸೈನ್ಸ್‌ನ್ನು ಪ್ರೊಡಿಕಲ್ ಸೈನ್ಸ್‌ ಎಂದು ಉಚ್ಛರಿಸಿದ್ದಳಲ್ಲದೇ ಇದು ಅಡುಗೆ ಮಾಡುವುದನ್ನು ಕಲಿಸುವ ವಿಷಯ ಎಂದಿದ್ದಳು. ಅವಳು ಈ ಉತ್ತರ ನೀಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡಿತ್ತು. ಅವಳು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಎನ್ನಿಸಿಕೊಂಡಿದ್ದು ಅದರಲ್ಲೂ ರಾಜ್ಯಶಾಸ್ತ್ರದಲ್ಲಿ ಗರಿಷ್ಠ ಅಂಕ ಗಳಿಸಿದ್ದಳು.
 
ಶನಿವಾರ ಪರೀಕ್ಷೆಯನ್ನೆದುರಿಸಿದ ರುಬಿಗೆ ಕವಿ, ಸಂತ ತುಳಸಿದಾಸ್ ಅವರ ಬಗ್ಗೆ ಪ್ರಬಂಧ ಬರೆಯಲು ಹೇಳಲಾಗಿತ್ತು. ಅದಕ್ಕೆ ಅವಳು ಬರೆದಿದ್ದು ಒಂದು ಸಾಲಿನ ಉತ್ತರ. 'ತುಳಸಿದಾಸ್ ಜಿ ನಮಸ್ಕಾರ'.
 
ಬಿಹಾರದಲ್ಲಿ ಸಾಮೂಹಿಕ ನಕಲು ಎನ್ನುವುದು ಸಾಮಾನ್ಯ ಸಂಗತಿ. ಕಳೆದ ವರ್ಷ ಪೋಷಕರು ಮತ್ತು ಸ್ನೇಹಿತರು ಶಾಲೆಯ ಗೋಡೆ ಹತ್ತಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ನಕಲು ಮಾಡಲು ಚೀಟಿ ನೀಡುವುದು ಬೆಳಕಿಗೆ ಬಂದಿತ್ತು. 
 
ವರದಿಗಳ ಪ್ರಕಾರ ಬಿಹಾರದಲ್ಲಿ 'ರಾಕೆಟ್ ರನ್' ದಂಧೆ ನಡೆಯುತ್ತಿದ್ದು, 15 ಲಕ್ಷ ನೀಡಿ ಟಾಪರ್ ಪಟ್ಟಿಯಲ್ಲಿ ಹೆಸರು ಗಳಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಪೋರ್ಷೆ ಸಂಸ್ಥೆಯಿಂದ ಹೊಸ ಆವೃತ್ತಿಯ 911 ಮಾಡೆಲ್ ಕಾರುಗಳ ಬಿಡುಗಡೆ