ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಿಮಿ ಸಂಚು ಹೂಡಿತ್ತು ಎಂಬ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಸ್ವತಃ ಸಿಮಿ ಆಪರೇಟಿವ್ ಗುರ್ಫಾನ್ ಇದನ್ನು ಒಪ್ಪಿಕೊಂಡಿದ್ದಾನೆ.
ತನ್ನ ಇಬ್ಬರು ಸಹಚರರಾದ ಈಜಾವುದ್ದೀನ್ ಮತ್ತು ಅಸ್ಲ್ಂ ಇಂದೋರ್ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ನಂತರ ರಾಯ್ಪುರ್ ಪೊಲೀಸರಿಗೆ ಶರಣಾದ ಗುರ್ಫಾನ್ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮೋದಿಯವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ತಪ್ಪೊಪ್ಪಿ ಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣಾ ಪ್ರಚಾರ ವೇಳೆ ಮೋದಿ ಅಂಬಿಕಾಪುರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ನಡೆಸಿದ ಸಂದರ್ಭದಲ್ಲಿ ಅವರ ಹತ್ಯೆಗೆ ಸಂಚು ಹೆಣೆಯಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದಾಗಿ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಅವರು ವಿಫಲರಾದರು ಎಂದು ತಿಳಿದು ಬಂದಿದೆ.
ಈ ಯೋಜನೆ ವಿಫಲಗೊಂಡ ನಂತರ ಅಲ್ಲಿಂದ ಗುರ್ಫಾನ್ ರಾಯ್ಪುರದಿಂದ ಪರಾರಿಯಾಗಿದ್ದ.
ಗುರ್ಫಾನ್ ಪೊಲೀಸರಿಗೆ ಸಹಕರಿಸುತ್ತಿದ್ದಾನೆ. ಆದರೆ ಆತ ಪರಾರಿಯಾಗಿದ್ದು ಎಲ್ಲಿ, ಆತ ಅಲ್ಲೇನು ಮಾಡುತ್ತಿದ್ದ, ಯಾರ ಜತೆ ಸೇರಿಕೊಂಡಿದ್ದ, ಯಾವ ಯೋಜನೆಯನ್ನು ರೂಪಿಸುತ್ತಿದ್ದ ಎಂಬುದನ್ನು ಮಾತ್ರ ಬಾಯ್ಬಿಡುತ್ತಿಲ್ಲ ಎಂದು ಪೊಲೀಸ್ ಅಧೀಕ್ಷಕ ಜೆ.ಪಿ.ಸಿಂಗ್ ಹೇಳಿದ್ದಾರೆ.