ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಪೂಂಛ್ ಜಿಲ್ಲೆಯಲ್ಲಿರುವ ನವಗ್ರಹ ಮಂದಿರಕ್ಕೆ ತೆರಳಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಇದೊಂದು ರಾಜಕೀಯ ಗಿಮಿಕ್ ಎಂದು BJP ನಾಯಕರು ತಿವಿದಿದ್ದಾರೆ. ಇತ್ತ ಮುಸ್ಲಿಂ ಧಾರ್ಮಿಕ ಮುಖಂಡರು 'ಇದು ಇಸ್ಲಾಂ ವಿರೋಧಿ ನಡೆಯಾಗಿದೆ,' ಎಂದು ಕಿಡಿಕಾರಿದ್ದಾರೆ. ಆದರೆ ಇದ್ಯಾವುದಕ್ಕೂ ಮುಫ್ತಿ ಅವರು ಸೊಪ್ಪು ಹಾಕದೇ, ತಮಗೆ ಧರ್ಮ ಪಾಲನೆಯ ಬುದ್ಧಿವಾದ ಬೇಕಿಲ್ಲಎಂದು ಖಡಕ್ಕಾಗಿ ಹೇಳಿದ್ದಾರೆ. ನಮ್ಮದು ಜಾತ್ಯತೀತ ರಾಷ್ಟ್ರ. ನಾನು ವೈಯಕ್ತಿಕವಾಗಿ ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ. ನಮ್ಮ ನಾಯಕರಾದ ದಿವಂಗತ ಯಶಪಾಲ್ ಶರ್ಮಾ ಅವರು ನಿರ್ಮಿಸಿದ್ದ ಸುಂದರ ಮಂದಿರಕ್ಕೆ ತೆರಳಿದ್ದೆ. ಅಲ್ಲಿದ್ದ ಕೆಲವರು ನನಗೆ ನೀರು ತುಂಬಿದ ಪಾತ್ರೆಯನ್ನು ಅತ್ಯಂತ ಪ್ರೀತಿಯಿಂದ ಕೈಗಿತ್ತರು. ಅವರ ಪ್ರೀತಿಯನ್ನು ಗೌರವಿಸಿ ಶುದ್ಧ ಮನಸ್ಸಿನಿಂದಲೇ ಶಿವನಿಗೆ ಜಲಾಭಿಷೇಕ ಮಾಡಿದೆ. ಬೇರೆಯವರಿಂದ ಧರ್ಮದ ಬುದ್ಧಿವಾದ ಬೇಕಿಲ್ಲ, ಎಂದು ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದಾರೆ.