ನೋಟು ಅಪಮೌಲ್ಯೀಕರಣದ ಕುರಿತು ದೇಶಾದ್ಯಂತ ಪರವಿರೋಧ ಕೇಳಿಬರುತ್ತಿದೆ. ಅದೆನೇ ಇರಲಿ ಮೋದಿ ಅವರ ಈ ನಿರ್ಧಾರ ಕಮರಲಿದ್ದ ಲಕ್ಷಾಂತರ ಅಮಾಯಕ ಬಾಲೆಯರ ಬದುಕನ್ನು ಉಳಿಸಿದೆ ಎಂದರೆ ನಂಬುತ್ತೀರಾ? ಹೌದು ನೀವು ನಂಬಲೇಬೇಕಾದ ಮತ್ತು ಓದಲೇ ಬೇಕಾದ ಸುದ್ದಿ ಇದು.
ಮಾನವ ಕಳ್ಳ ಸಾಗಾಣಿಕೆ ದಂಧೆ ನಮ್ಮ ದೇಶದ ಮೂಲೆಮೂಲೆಯಲ್ಲಿ ಬೇರೂರಿದ್ದು, ದೇಶ ಎದುರಿಸುತ್ತಿರುವ ಬಹುದೊಡ್ಡ ಸಾಮಾಜಿಕ ಪಿಡುಗುಗಳಲ್ಲೊಂದು. ಪ್ರತಿವರ್ಷ ಸಾವಿರಾರು ಅಪ್ರಾಪ್ತೆಯರು ವೇಶ್ಯಾವಾಟಿಕೆ ಗೃಹಕ್ಕೆ ನೂಕಲ್ಪಡುತ್ತಿದ್ದರು. ದೇಶಾದ್ಯಂತ ವ್ಯಾಪಿಸಿರುವ ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ನಮ್ಮ ಸುತ್ತ ಮುತ್ತಲಿರುವ ಪುಟ್ಟ ಪುಟ್ಟ ಕಂದಮ್ಮಗಳೇ ಸಿಲುಕುತ್ತಿದ್ದವು. ಶಾಲೆಗೆ ಹೋಗುವಾಗ, ಬರುವಾಗ ಅವರನ್ನು ಅಪಹರಿಸುವುದು, ಬಡ ಮಕ್ಕಳಿಗೆ ಆಮಿಷ ತೋರಿಸಿ ಕರೆದೊಯ್ಯುವುದು, ಕೆಲಸದ ನೆಪದಲ್ಲಿ ಕರೆದುಕೊಂಡು ಹೋಗುವುದು.... ಹೀಗೆ ನಾನಾ ವಿಧದಲ್ಲಿ ಇನ್ನೂ ವಯಸ್ಸಿಗೆ ಬರದ ಹೆಣ್ಣು ಮಕ್ಕಳನ್ನು ದುರುಳರು ಹೊತ್ತೊಯ್ಯುತ್ತಿದ್ದರು.
ನವದೆಹಲಿ, ಒಡಿಶಾ, ಮುಂಬೈ ಸೇರಿದಂತೆ ಬಾಂಗ್ಲಾ, ನೇಪಾಳದಂತಹ ಹೊರ ರಾಷ್ಟ್ರಗಳಿಗೂ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸಾಗಾಣಿಕೆ ಮಾಡಲಾಗುತ್ತಿತ್ತು. ಹೊಸವರ್ಷದ ಹಿನ್ನೆಲೆಯಲ್ಲಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಳ್ಳ ಸಾಗಾಣಿಕೆ ವ್ಯವಹಾರ ಎಲ್ಲೆ ಮೀರುತ್ತಿತ್ತು. ವಾಮಾಚಾರ ಮಾಡುವವರು ಕೂಡ ಬಲಿ ನೀಡಲು ಮಕ್ಕಳನ್ನು ಖರೀದಿಸುತ್ತಿದ್ದರು.
ಕಳ್ಳ ಸಾಗಾಣಿಕೆ ವ್ಯವಹಾರದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿಗೇ ಹೆಚ್ಚು ಬೇಡಿಕೆ. 10 ರಿಂದ 12 ವರ್ಷದ ಒಳಗಿನ ಮಕ್ಕಳಿಗೆ 5 ಲಕ್ಷ ರು. ನಿಗದಿ ಪಡಿಸಿದರೆ, 13 ರಿಂದ 15 ವರ್ಷದೊಳಗಿನ ಮಕ್ಕಳಿಗೆ 4 ಲಕ್ಷ ರು. ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 3, 2 ಲಕ್ಷ ರು.ನಂತೆ ವೇಶ್ಯಾಗೃಹದ ಮಾಲೀಕರಿಗೆ ಮಾರಾಟ ಮಾಡುತ್ತಾರೆ. ಅವರನ್ನು ಖರೀದಿಸಿದವರು ಬಲವಂತವಾಗಿ ವೇಶ್ಯಾವೃತ್ತಿಗೆ ತಳ್ಳುತ್ತಾರೆ.
ಒಮ್ಮೆ ಅಪಹರಿಸಲ್ಪಟ್ಟ ಹೆಣ್ಣು ಮಕ್ಕಳು, ಮಹಿಳೆಯರು ಬಳಿಕ ಸಹಜ ಬದುಕಿಗೆ ಮರಳುವುದು ಕನಸಿನ ಮಾತು. ಕೆಲವರು ದೈಹಿಕ, ಮಾನಸಿಕ ಕಾಯಿಲೆಗಳಿಂದ , ಹೆಚ್ಐವಿಯಂತಹ ಮಾರಣಾಂತಿಕ ರೋಗಕ್ಕೆ ತುತ್ತಾದರೆ ಕೆಲವರು ಗತಿ ಇಲ್ಲದೇ ವೇಶ್ಯಾವಾಟಿಕೆಯನ್ನೇ ಮುಂದುವರೆಸುತ್ತಾರೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರನ್ನು ಕೊಲ್ಲಲಾಗುತ್ತದೆ ಅಥವಾ ಕ್ರೂರ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಯಾರದ್ದೋ ದುರಾಸೆಗೆ ಅಮಾಯಕರ ಸಂಪೂರ್ಣ ಬದುಕು, ಅವರನ್ನು ಕಳೆದುಕೊಂಡ ಕುಟುಂಬದವ ಬದುಕು ಮೂರಾಬಿಟ್ಟಿಯಾಗುತ್ತದೆ.
ಈ ಮಾನವ ಕಳ್ಳ ಸಾಗಾಣಿಕೆ ಆಡಳಿತ ಯಂತ್ರಕ್ಕೆ ತಿಳಿಯದ ವಿಷಯವೇನಲ್ಲ. ಪೊಲೀಸ್ ಹಾಗೂ ಸರಕಾರಿ ಇಲಾಖೆ ಅಧಿಕಾರಿಗಳ ಮೂಗಿನ ನೇರಕ್ಕೇ ನಡೆಯುವ ಕಾನೂನು ಬಾಹಿರ ವ್ಯವಹಾರವಿದು. ಇದಕ್ಕೆ ಬಿಳಿ ಬಟ್ಟೆ ತೊಟ್ಟ ಜನಪ್ರತಿನಿಧಿಗಳ ಕೃಪಾಕಟಾಕ್ಷವೂ ಇದೆ ಎನ್ನುವುದು ಕನ್ನಡಿಯಷ್ಟೇ ಸತ್ಯ.
ಒಂದು ಮಗುವಿನ ಕಳ್ಳ ಸಾಗಾಣಿಕೆಗೆ 2.5 ರಿಂದ 3 ಲಕ್ಷ ರು. ವೆಚ್ಚವಾಗುತ್ತದೆ. ಜನಪ್ರತಿನಿಧಿಗಳಿಗೆ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ, ಆಡಳಿತದಲ್ಲಿರುವ ಅಧಿಕಾರಿ ವರ್ಗದವರಿಗೆ ಹಾಗೂ ಮಕ್ಕಳನ್ನು ಅಂದಗೊಳಿಸುವ ಕೆಲಸಗಾರರಿಗೆಂದು ಕನಿಷ್ಠ ಇಷ್ಟಾದರೂ ಅವರು ವೆಚ್ಚಮಾಡಲೇಬೇಕು. ಇದರಲ್ಲಿ ಸಾಗಾಣಿಕೆ ವೆಚ್ಚ ಮಾತ್ರ ಕೇವಲ 20ಸಾವಿರ ರು. ಇರಬಹುದು. ಪ್ರತಿ ವರ್ಷ 19 ಕೋಟಿ ರು.ಗಳ ವ್ಯವಹಾರ ಮಕ್ಕಳ ಕಳ್ಳ ಸಾಗಾಣಿಕೆಯಿಂದ ನಡೆಯುತ್ತಿದೆ ಎಂದು ರಾಷ್ಟ್ರೀಯ ಬಾಲ ಕಾರ್ಮಿಕ ಸಂಸ್ಥೆ, ಕಾರ್ಮಿಕ ಸಂಘಗಳ ಜಾಲ ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳು ನಡೆಸಿದ ಅಧ್ಯಯನ ಹೇಳುತ್ತದೆ.
ಪ್ರತಿ ದಿನ ಹತ್ತರಿಂದ ಹದಿನೈದು ಮಕ್ಕಳು ಕಳ್ಳ ಸಾಗಾಣಿಕೆಗೆ ಒಳಗಾಗುತ್ತಿದ್ದರು. ಆದರೆ, ನ. 8ರ ನಂತರ ಒಂದೇ ಒಂದು ಮಗು ಸಾಗಾಣಿಕೆಯಾದ, ಅಪಹರಣವಾದ ಕುರಿತು ಎಲ್ಲಿಯೂ ದೂರು ದಾಖಲಾಗಿಲ್ಲ. ಇದೊಂದು ಅದ್ಭುತ ಬೆಳವಣಿಗೆ ಅಲ್ಲವೇ? ಎಂದು ಬಚಪನ್ ಬಚಾವೋ ಆಂದೋಲನ ಸಂಸ್ಥೆಯ ರಾಕೇಶ ಸೆಂಗರ್ ಅಭಿಪ್ರಾಯಪಡುತ್ತಾರೆ.
ಆದರೆ, ನವೆಂಬರ್ 8ರ ನಂತರ ಈ ವ್ಯವಹಾರ ಸಂಪೂರ್ಣ ನೆಲಕಚ್ಚಿದೆ! ಇದ್ದ ಬಿದ್ದ ವೇಶ್ಯಾಗೃಹಗಳೆಲ್ಲ ಬಿಕೋ ಎನ್ನುತ್ತಿವೆ. ಗಬ್ಬೆದ್ದು ನಾರುತ್ತಿದ್ದ ಹಾಸಿಗೆ, ದಿಂಬುಗಳೆಲ್ಲ ಮತ್ತಷ್ಟು ನಾರುತ್ತ, ಧೂಳು ತಿನ್ನುತ್ತ ಬಿದ್ದಿವೆ! ಕಾರಣ 500, 1000 ಮುಖಬೆಲೆಯ ನೋಟುಗಳ ಅಪಮೌಲ್ಯ! ಇಂತಹ ವಿಭಿನ್ನ ದೃಷ್ಟಿಕೋನದ ಮಾಹಿತಿಯೊಂದನ್ನು POSTCARD.NEWS ಹೊರಹಾಕಿದೆ.
ಹಳೆ ನೋಟಿನ ಅಪಮೌಲ್ಯದಿಂದ ವೇಶ್ಯಾಗೃಹದ ಕಡೆಗೆ ಗ್ರಾಹಕರು ಮುಖಮಾಡುತ್ತಿಲ್ಲ. ಇದರಿಂದ ಮಾಲೀಕರು ತಮ್ಮ ವ್ಯಾಪಾರ ಕಳೆದುಕೊಂಡು ತೆಪ್ಪಗೆ ಕುಳಿತಿದ್ದಾರೆ. ಮಕ್ಕಳ ಸಾಗಾಣಿಕೆ ಉದ್ಯಮದ ಬೆನ್ನು ಮೂಳೆಯೇ ಕಪ್ಪು ಹಣ ಆಗಿತ್ತು. ಅದಕ್ಕೆ ಪ್ರಧಾನಿ ಮೋದಿ ಕಡಿವಾಣ ಹಾಕಿದ್ದರಿಂದ, ಉದ್ಯಮದ ಮೂಳೆಯೇ ಮುರಿದು ಬಿದ್ದಂತಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ತಂದ ಬೆಳವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ. ಮತ್ತೆ ಕಪ್ಪು ಹಣ ವ್ಯವಸ್ಥೆಯಲ್ಲಿ ಬೇರೂರದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಸಲಹೆ ನೀಡಿದ್ದೇವೆ, ಎಂದು ನೊಬೆಲ್ ಪುರಸ್ಕೃತ ಕೈಲಾಸ ಸತ್ಯಾರ್ಥ ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ