ಸದನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಕೋಲಾಹಲದ ಮಧ್ಯೆ ಇಂದು ಪ್ರಧಾನಿ ಮೋದಿಯನ್ನು ಭೇಟಿಯಾದ ರಾಹುಲ್ ಗಾಂಧಿ ನಿಯೋಗ ಆದಷ್ಟು ಬೇಗ ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದೆ.
ಮೋದಿ ಸದನದಲ್ಲಿ ಮಾತನಾಡಲಿದ್ದಾರೆ ಎಂಬ ಸುದ್ದಿಯ ನಡುವೆ ಕಾಂಗ್ರೆಸ್ ನಿಯೋಗ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲವನ್ನು ಕೆರಳಿಸಿದೆ.
ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಆನಂದ ಶರ್ಮಾ ಸೇರಿದಂತೆ ಹಿರಿಯ ನಾಯಕರನ್ನೊಳಗೊಂಡ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಿತು. ರಾಹುಲ್ ಉತ್ತರ ಪ್ರದೇಶದ ರೈತರ ಸಮಸ್ಯೆಗಳನ್ನಿಟ್ಟುಕೊಂಡು ಪ್ರಧಾನಿಯನ್ನು ಭೇಟಿ ಮಾಡಿದರು. ರೈತರ ಸಾಲಮನ್ನಾ, ಆತ್ಮಹತ್ಯೆಗೆ ತಡೆಗೆ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಯಿತು ಎಂದು ಹೇಳಲಾಗುತ್ತಿದೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, "ಗೋಧಿ ಆಮದು ಸುಂಕವನ್ನು ತೆಗೆದಿರುವುದು ಅತ್ಯಂತ ಕೆಟ್ಟ ನಿರ್ಧಾರ. ರೈತರ ಪರಿಸ್ಥಿತಿ ಗಂಭೀರ ಎಂಬುದನ್ನು ಪ್ರಧಾನಿ ಒಪ್ಪಿಕೊಂಡಿದ್ದಾರೆ. ರೈತರ ಸಾಲ ಮನ್ನಾ ಮಾಡಬೇಕು ಎಂದು ನಾನು ಒತ್ತಾಯಿಸಿದೆ. ಅವರೇನೂ ಉತ್ತರಿಸಲಿಲ್ಲ. ಕೇವಲ ಕೇಳುತ್ತಿದ್ದರು," ಎಂದು ಹೇಳಿದರು.
ಕಳೆದ ವಾರ, ದೇಶೀಯ ಗೋಧಿಯ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದರಿಂದ ಮತ್ತು ಎರಡು ವರ್ಷಗಳಿಂದ ಬರಗಾಲ ಆವರಿಸಿವುದರ ಪರಿಣಾಮ ಗೋಧಿ ಸಂಗ್ರಹಣೆ ಕಡಿಮೆ ಇದ್ದುದರಿಂದ ಕೇಂದ್ರ ಆಮದು ಗೋಧಿಯ ಮೇಲೆ 10 ಪ್ರತಿಶತದಷ್ಟು ಸುಂಕವನ್ನು ಕೈಬಿಟ್ಟಿತ್ತು.
ರಾಹುಲ್ ನೇತೃತ್ವದ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಿರುವುದು ಇದೇ ಮೊದಲೆನಿಸಿಕೊಂಡಿದೆ.
ಒಬ್ಬರಿಗೊಬ್ಬರು ಬಹಿರಂಗ ಟೀಕೆ ಮಾಡಿಕೊಳ್ಳುತ್ತಿದ್ದ ನಾಯಕದ್ವಯರು ಭೇಟಿಯಾಗಿದ್ದು ಬಹಳಷ್ಟು ಕುತೂಹಲವನ್ನು ಕೆರಳಿಸಿದೆ.
ಇದು ಉತ್ತರ ಪ್ರದೇಶ ಚುನಾವಣೆಯನ್ನು ಮುಂದಿಟ್ಟುಕೊಂಡು ರೂಪಿಸಿದ ರಣತಂತ್ರ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಯುಪಿಯಲ್ಲಿ ಮತ್ತೆ ಮೂರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಬಿಜೆಪಿ- ಕಾಂಗ್ರೆಸ್ ಮಧ್ಯೆ ಹಗ್ಗಜಗ್ಗಾಟದ ಕುಸ್ತಿ ನಡೆಯಲಿದೆ ಎಂಬುದು ಶತಸಿದ್ಧ. ಅದಕ್ಕೆ ಮುಂಚೆ ರಾಜ್ಯದ ಜನರಿಗೆ ಒಂದು ಸ್ಪಷ್ಟ ರಾಜಕೀಯ ಸಂದೇಶವನ್ನು ಕೊಡಲು ರಾಹುಲ್ ಈ ಭೇಟಿ ಮಾಡಿದ್ದರು. ರೈತರ ಸಾಲ ಮನ್ನಾ ಮಾಡಲು ಪ್ರಧಾನಿ ಒಪ್ಪಲ್ಲ. ಇದನ್ನು ಉತ್ತರ ಪ್ರದೇಶದ ಜನರಿಗೆ ಮನದಟ್ಟು ಮಾಡಿಸಬೇಕೆಂಬುದು ರಾಹುಲ್ ರಾಜಕೀಯ ಕುತಂತ್ರ. ಹೀಗಾಗಿ ಅವರ ಭೇಟಿ ಔಪಚಾರಿಕವಾಗಿತ್ತು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಭೇಟಿ ಸಮಯದಲ್ಲಿ ಮೋದಿ, ನೀವು ಸದನ ನಡೆಯಲಿಕ್ಕೆ ಬಿಡಬೇಕಿತ್ತು ಎಂದು ಕೈ ನಾಯಕರಿಗೆ ಹೇಳಿದರು. ಜತೆಗೆ ಆಗಾಗ್ಗೆ ಭೇಟಿ ಮಾಡುತ್ತಿರು ಎಂದು ರಾಹುಲ್ ಗಾಂಧಿ ಅವರಿಗೆ ಕಿವಿಮಾತು ಹೇಳಿದರು ಎಂದು ಮೂಲಗಳು ಹೇಳುತ್ತಿವೆ.
ಏನೇ ಇರಲಿ ಮೊನ್ನೆ ತಾನೇ ಮೋದಿ ಮಾಡಿರುವ ಭ್ರಷ್ಟಾಚಾರದ ಮಾಹಿತಿ ನನ್ನ ಬಳಿ ಇದೆ ಎಂದಿದ್ದ ರಾಹುಲ್, ಪ್ರಧಾನಿಯನ್ನು ಭೇಟಿ ಮಾಡಿದ್ದು ಕೌತುಕವನ್ನು ಸೃಷ್ಟಿಸಿರುವುದು ಸತ್ಯ.