Select Your Language

Notifications

webdunia
webdunia
webdunia
webdunia

ಅಮಿತಾಬ್ ಬಚ್ಚನ್‌ರಿಂದ 20 ಅಡಿ ದೂರದಲ್ಲಿ ಶೂಟೌಟ್ ನಡೆಸಿದ ಆರೋಪಿಗಳು

ಅಮಿತಾಬ್ ಬಚ್ಚನ್‌ರಿಂದ 20 ಅಡಿ ದೂರದಲ್ಲಿ ಶೂಟೌಟ್ ನಡೆಸಿದ ಆರೋಪಿಗಳು
ಮುಂಬೈ , ಶುಕ್ರವಾರ, 22 ಮೇ 2015 (16:42 IST)
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಎದುರಿನಲ್ಲಿಯೇ ಇಬ್ಬರು ಆರೋಪಿಗಳು ಭದ್ರತಾ ಗುತ್ತಿಗೆದಾರನ ಮೇಲೆ ಶೂಟೌಟ್ ನಡೆಸಿ ಪರಾರಿಯಾದ ಘಟನೆ ವರದಿಯಾಗಿದೆ.
 
ಗೊರೆಗಾಂವ್ ಪೂರ್ವದಲ್ಲಿರುವ ಫಿಲ್ಮ್‌ಸಿಟಿಯೊಳಗೆ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಆರೋಪಿಗಳು ಭಧ್ರತಾ ಗುತ್ತಿಗೆದಾರ ರಾಜು ಶಿಂಧೆ ಮೇಲೆ ಗುಂಡಿನ ದಾಳಿ ನಡೆಸಿ ದ್ವಿಚಕ್ರವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಆಕೆ ಕಾಲೋನಿಯ ಪೊಲೀಸರು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
 
 ಗುಂಡಿನ ದಾಳಿಯಿಂದಾಗಿ ಗುತ್ತಿಗೆದಾರ ಶಿಂಧೆ ಗಂಭೀರವಾಗಿ ಗಾಯಗೊಂಡಿದ್ದಾನೆ ಲೈಫ್ ಲೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತದ ನಂತರ ಪರಿಸ್ಥಿತಿ ಗಂಭೀರವಾಗಿದ್ದರಿಂದ ಆತನನ್ನು ವಿಲೇ ಪಾರ್ಲೆಯಲ್ಲಿರುವ ನಾನಾವತಿ ಆಸ್ಪತ್ರೆಗೆ ಸೇರಿಸಲಾಗಿದೆ.    
 
ಆರೋಪಿಗಳು ನಮ್ಮಿಂದ ಕೇವಲ 20 ಅಡಿ ದೂರದಿಂದ ಗುಂಡಿನ ದಾಳಿ ನಡೆಸಿದರು ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದಾರೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಬಚ್ಚನ್ ಹೇಳಿದ್ದಾರೆ. 
 
ಇಂದು ಮಧ್ಯಾಹ್ನ 2 ಗಂಟೆಗೆ ಭದ್ರತಾ ಗುತ್ತಿಗೆದಾರ ರಾಜು ಶಿಂಧೆ ಫಿಲ್ಮ್ ಸಿಟಿಯಲ್ಲಿರುವ ತಮ್ಮ ಕಚೇರಿಯ ಹೊರ ಆವರಣದಲ್ಲಿ ಕುಳಿತಿದ್ದರು. ಅದೇ ಸಂದರ್ಭದಲ್ಲಿ ಒಳಗೆ ನುಗ್ಗಿದ ಆರೋಪಿಗಳು ಮೂರು ಸುತ್ತು ಗುಂಡುಹಾರಿಸಿದ್ದಾರೆ. ಎರಡು ಗುಂಡುಗಳು ಶಿಂಧೆಯವರ ಹೊಟ್ಟೆಗೆ ತಗುಲಿದ್ದು, ಒಂದು ಗುಂಡು ಆತನ ತೋಳನ್ನು ಸೀಳಿದೆ. ಕೂಡಲೇ ಭದ್ರತಾ ಸಿಬ್ಬಂದಿ ಆರೋಪಿಗಳನ್ನು ಬೆನ್ನಟ್ಟಿದರಾದರೂ ಪ್ರಯೋಜನವಾಗಿಲ್ಲ . ಆರೋಪಿಗಳು ಅರಣ್ಯದೊಳಗೆ ಪಲಾಯನಗೈದಿದ್ದಾರೆ. 
 
ಪೊಲೀಸರು ಆರೋಪಿಗಳು ಶೂಟೌಟ್‌ಗೆ ಬಳಸಿದ್ದ ದ್ವಿಚಕ್ರವಾಹನದ ನೋಂದಣಿ ಸಂಖ್ಯೆಯನ್ನು ಆರ್‌ಟಿಓ ಕಚೇರಿಯ ದಾಖಲೆಗಳ ಮೂಲಕ ಪರಿಶೀಲಿಸುತ್ತಿದ್ದು ವಾಹನದ ಮಾಲೀಕ ಯಾರು ಎನ್ನುವ ಬಗ್ಗೆ ತನಿಖೆ ನಡೆಸಿದ್ದಾರೆ.
 
ಫಿಲ್ಮ್ ಸಿಟಿಯ ಭದ್ರತಾ ಗುತ್ತಿಗೆದಾರ ರಾಜು ಶಿಂಧೆಯವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದವೆಯೇ ಎನ್ನುವ ಬಗ್ಗೆ ಕೂಡಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
 
 
 

Share this Story:

Follow Webdunia kannada