Select Your Language

Notifications

webdunia
webdunia
webdunia
webdunia

ಟಿಪ್ಪು ದಕ್ಷಿಣದ ಔರಂಗಜೇಬ್, ಸಿಎಂ ಸಿದ್ದು ಕರ್ನಾಟಕದ ಲಾಲು ಯಾದವ್: ಆರೆಸ್ಸೆಸ್

ಟಿಪ್ಪು ದಕ್ಷಿಣದ ಔರಂಗಜೇಬ್, ಸಿಎಂ ಸಿದ್ದು ಕರ್ನಾಟಕದ ಲಾಲು ಯಾದವ್: ಆರೆಸ್ಸೆಸ್
ನವದೆಹಲಿ , ಮಂಗಳವಾರ, 24 ನವೆಂಬರ್ 2015 (16:34 IST)
ಅಲ್ಪಸಂಖ್ಯಾತರನ್ನು ಓಲೈಸಲು ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಬಗ್ಗೆ ಖಾರವಾಗಿ ಟೀಕಿಸಿರುವ ಪಾಂಚಜನ್ಯ, ಟಿಪ್ಪು ಸುಲ್ತಾನ್ ದಕ್ಷಿಣದ ಔರಂಗಜೇಬ್‌ನಂತೆ ಲಕ್ಷಾಂತರ ಹಿಂದೂಗಳನ್ನು ಒತ್ತಾಯಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದನು. ಟಿಪ್ಪು ಜಯಂತಿ ಆಚರಿಸುತ್ತಿರುವ ಸಿದ್ದರಾಮಯ್ಯ ಕರ್ನಾಟಕದ ಲಾಲುನಂತೆ ಎಂದು ವರ್ಣಿಸಿದೆ. 
 
ರಾಜ್ಯ ಸರಕಾರ ಮುಸ್ಲಿಂ ಸಮುದಾಯದವರಾದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಮತ್ತು ಮೈಸೂರು ಪ್ರಾಂತ್ಯದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಜಯಂತಿಗಳನ್ನು ಆಚರಿಸುವುದು ಬಿಟ್ಟು, ಟಿಪ್ಪು ಸುಲ್ತಾನ್‌ನಂತಹ ಧರ್ಮಾಂಧನ ಜಯಂತಿ ಆಚರಣೆಗೆ ಮುಂದಾಗಿದೆ ಎಂದು ಆರೆಸ್ಸೆಸ್ ಮುಖವಾಣಿಯಾದ ಆರ್ಗನೈಸರ್ ಕಿಡಿಕಾರಿದೆ. 
 
ಟಿಪ್ಪು ಸುಲ್ತಾನ್ ವಿವಾದಾತ್ಮಕ ವ್ಯಕ್ತಿ. ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತಿರುವುದು ಕೇವಲ ಮುಸ್ಲಿಮರನ್ನು ಓಲೈಸಲು ಮಾತ್ರ. ಟಿಪ್ಪುಸುಲ್ತಾನ್ ಬೆಂಬಲಿಗರು ಮತ್ತು ಟಿಪ್ಪು ಜಯಂತಿ ವಿರೋಧಿಸುವವರ ಮಧ್ಯೆ ದ್ವೇಷದ ವಾತಾವರಣ ಉಂಟಾಗಿದೆ ಎಂದು ಪ್ರಕಟಿಸಿದೆ.
 
ಹಿಂದುಸಂಘಟನೆಗಳ ಪ್ರಕಾರ, ಟಿಪ್ಪು ಜಾತ್ಯಾತೀತವಾದಿಯಲ್ಲ.  ಭಾರಿ ಸಂಖ್ಯೆಯಲ್ಲಿ ದೇವಾಲಯಗಳನ್ನು ನೆಲಸಮಗೊಳಿಸಿ ಹಿಂದೂಗಳನ್ನು ಒತ್ತಾಯಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ ಆತನೊಬ್ಬ ದಕ್ಷಿಣ ಭಾರತದ ಔರಂಗಜೇಬ್‌ನಂತೆ ಎಂದು ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ ಲೇಖನದಲ್ಲಿ ಪ್ರಕಟಿಸಲಾಗಿದೆ.
 
ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ನಾಯಕನಂತೆ ಬಿಂಬಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಲಾಲು ಯಾದವ್‌ರಂತೆ ಎಂದು ಆರೆಸ್ಸೆಸ್ ಮುಖವಾಣಿ ಪಾಂಚಜನ್ಯದಲ್ಲಿ ಲೇಖನವನ್ನು ಪ್ರಕಟಿಸಲಾಗಿದೆ. 

Share this Story:

Follow Webdunia kannada