Select Your Language

Notifications

webdunia
webdunia
webdunia
webdunia

ಭಾರತ ಹಾವಾಡಿಗರ ದೇಶವಲ್ಲ, ವಿಶ್ವವೇ ಗೌರವಿಸುವಂತಹ ನಾಡು: ಮೋದಿ

ಭಾರತ ಹಾವಾಡಿಗರ ದೇಶವಲ್ಲ, ವಿಶ್ವವೇ ಗೌರವಿಸುವಂತಹ ನಾಡು: ಮೋದಿ
ಟೋಕಿಯೋ , ಮಂಗಳವಾರ, 2 ಸೆಪ್ಟಂಬರ್ 2014 (18:17 IST)
ಭಾರತವನ್ನು ಹಾವಾಡಿಗರ ನಾಡು ಎಂದು ಕರೆಯುತ್ತಿದ್ದರು. ಆದರೆ ಇಂದು ಇಡೀ ವಿಶ್ವವೇ ಭಾರತವನ್ನು ಗೌರವಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ನಮಗೆ ನಮ್ಮದೇ ಆದ ಗೌರವವಿದೆ. ಇಂದು ಭಾರತದ ಶಕ್ತಿ ಏನೆಂದು ಇಡೀ ಜಗತ್ತಿಗೇ ತಿಳಿದಿದೆ. ನಮ್ಮ ಬೆಳವಣಿಗೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕಿದ್ದು, ಇಂದು ಇಡೀ ವಿಶ್ವವೇ ಭಾರತಕ್ಕೆ ಗೌರವ ನೀಡುತ್ತಿದೆ'.
 
2019ರೊಳಗೆ ಜಪಾನ್‌ನಂತೆ ಸ್ವಚ್ಛ ಭಾರತವನ್ನು ನಿರ್ಮಿಸಿ ತೋರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
 
5 ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಟೋಕಿಯೋದಲ್ಲಿ ಭಾರತೀಯ ಒಕ್ಕೂಟವನ್ನು ಉದ್ದೇಶಿಸಿ ಮಾತನಾಡಿದರು. 
 
ವಿವೇಕಾನಂದ ಸೆಂಟರ್‌ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು, 'ನಮ್ಮ ಆಡಳಿತಾವಧಿಯಲ್ಲಿ ಸ್ವಚ್ಛ ಭಾರತ ಆಂದೋಲನಕ್ಕೆ ಹೆಚ್ಚು ಒತ್ತು ನೀಡುತ್ತೇನೆ. ಜಪಾನ್ ದೇಶದಂತೆ ಭಾರತವನ್ನು ನಾವು ಸ್ವಚ್ಛಗೊಳಿಸಬೇಕಿದೆ. ಹೀಗಾಗಿ ಸ್ವಚ್ಛ ಭಾರತ ಆಂದೋಲನವನ್ನು ಆರಂಭಿಸಿದ್ದೇನೆ'.
 
'ಸ್ವಚ್ಛ ಭಾರತ ಆಂದೋಲನ ಕ್ಲಿಷ್ಟಕರವಾಗಿದ್ದು, ಯಾವುದೇ ಆಂದೋಲನಗಳು ಆರಂಭಗೊಳ್ಳುವವರೆಗೂ ಅದು ಕ್ಲಿಷ್ಟಕರವಾಗಿರುತ್ತವೆ. ಆದರೆ ಸ್ವಚ್ಛ ಭಾರತ ಆಂದೋಲನ ನಾವು ಮಹಾತ್ಮ ಗಾಂಧೀಜಿ ಅವರಿಗೆ ಸಲ್ಲಿಸುವ ಗೌರವವಾಗಿದೆ. ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನೋತ್ಸವದ ಅಂಗವಾಗಿ ನಾವು ಸ್ವಚ್ಛ ಭಾರತವನ್ನು ಅವರಿಗೆ ಅರ್ಪಿಸೋಣ. 2019ರೊಳಗೆ ಸ್ವಚ್ಛ ಭಾರತವನ್ನು ನಾನು ನಿರ್ಮಿಸಿಯೇ ತೀರುತ್ತೇನೆ' ಎಂದು ಪ್ರಧಾನಿ ಮೋದಿ ಹೇಳಿದರು.
 
'ನಾವು ಎಂದಿಗೂ ನಮ್ಮ ಪೂರ್ವವನ್ನು ಮತ್ತು ನಾವು ನಡೆದು ಬಂದ ಹಾದಿಯನ್ನು ಎಂದಿಗೂ ಮರೆಯಬಾರದು. ನಮ್ಮ ಬೆಳವಣಿಗೆ ಬಗ್ಗೆ ನಾವು ಹೆಮ್ಮೆ ಪಡಬೇಕು. 21ನೇ ಶತಮಾನದಲ್ಲಿ ಬೃಹತ್ ಬದಲಾವಣೆಯಾಗಲಿದ್ದು, ಭಾರತ ಮತ್ತು ಜಪಾನ್ ಒಪ್ಪಂದ ಬೃಹತ್ ಬದಲಾವಣೆಗೆ ನಾಂದಿಯಾಗಲಿದೆ. ಭಾರತದ ಮೇಲೆ ಜಪಾನ್ ಸಂಪೂರ್ಣ ನಂಬಿಕೆ ಇಟ್ಟಿದ್ದು, ಯಾವುದೇ ದ್ವಿಪಕ್ಷೀಯ ಒಪ್ಪಂದದಲ್ಲಿ ನಂಬಿಕೆ ಬಹುಮುಖ್ಯ ಪಾತ್ರವನ್ನು ನಿಭಾಯಿಸುತ್ತದೆ. ಹೀಗಾಗಿ ಜಪಾನ್‌ನ ಸಹಯೋಗದೊಂದಿಗೆ ನಾವು ಕಾರ್ಯ ನಿರ್ವಹಿಸುತ್ತೇವೆ. ವಾರಣಾಸಿಯನ್ನು ಹೈಟೆಕ್ ಸಿಟಿ ಮಾಡುವ ಗುರಿ ಇದೆ. ಆಧ್ಯಾತ್ಮಿಕ ವಿಚಾರಗಳಿಂದಾಗಿ ಖ್ಯಾತಿ ಗಳಿಸಿರುವ ವಾರಣಾಸಿಯನ್ನು ಆಧ್ಯಾತ್ಮಿಕ ಚಿಂತನೆಗೆ ಧಕ್ಕೆಯಾಗದಂತೆ ಅಭಿವೃದ್ಧಿ ಪಡಿಸಲಾಗುವುದು' ಎಂದು ಮೋದಿ ಹೇಳಿದರು.

Share this Story:

Follow Webdunia kannada