Select Your Language

Notifications

webdunia
webdunia
webdunia
webdunia

ಹೈದರಾಬಾದ್ ಪೊಲೀಸ್ ಕಮಿಷನರ್ ಆದ 10ರ ಪೋರ

ಹೈದರಾಬಾದ್ ಪೊಲೀಸ್ ಕಮಿಷನರ್ ಆದ 10ರ ಪೋರ
ಹೈದರಾಬಾದ್ , ಗುರುವಾರ, 16 ಅಕ್ಟೋಬರ್ 2014 (10:46 IST)
ಕನಸುಗಳೇ ಹಾಗೇ.. ಕಾಡುತ್ತವೆ, ನಿದ್ದೆಗೆಡಿಸುತ್ತವೆ. ಸಾಧನೆಯ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತವೆ. ಬಾಲ್ಯದಲ್ಲಿಯೇ ಮೂಡುವ ಕನಸುಗಳಿಗೆ ಬಣ್ಣ ಹಚ್ಚುತ್ತ ಆ ದಿಶೆಯಲ್ಲಿ ಹೆಜ್ಜೆ ಹಾಕಿ ಯಶ ಕಂಡರಷ್ಟೇ ನಮ್ಮ ಮುಂದಿನ ಬದುಕು ನೆಮ್ಮದಿಯ ಪಯಣದತ್ತ ಮುಂದುವರೆಯುತ್ತದೆ. ಆದರೆ ಕಂಡ ಕನಸು ನನಸಾಗದಿದ್ದರೆ ಉಳಿಯುವ ಕೊರಗು ಯಾತನಾಮಯ.

ಎಲ್ಲರಂತೆ ಆ ಪುಟ್ಟ ಕಂದ ಕನಸು ಕಂಡ. ಪೊಲೀಸ್ ಕಮಿಷನರ್ ಆಗುವ ಕನಸವನದು. ಅದರ ಬೆನ್ನು ಬೀಳಲು ಆತನೇನೋ ಸಿದ್ಧನಿದ್ದ. ಆದರೆ ವಿಧಿ ಅವನ ಹಿಂದೆ ಬಿದ್ದಿತ್ತು. ಅರಳುವ ಮುನ್ನವೇ ಹೊಸಕಿ ಹಾಕುವ ಸಂಚು ರೂಪಿಸಿತ್ತು. ಸಾವು ಆತನನ್ನು ಬೇಡವೆಂದರೂ ಬಾ ಎಂದು ಕರೆಯುತಿದೆ.  ಆದರವನ ಕನಸು ಆತನನ್ನು ಕಾಡುತಿದೆ. ಅವನಿಗೆ ತನ್ನ ದೇಹವನ್ನು ಕಂಗೆಡಿಸುತ್ತಿರುವ ಕಾಯಿಲೆ ಕಡೆ ಗಮನವಿಲ್ಲ. ಆತನ ಚಿತ್ತವೆಲ್ಲ ತಾ ಉನ್ನತ ಪೊಲೀಸ್ ಅಧಿಕಾರಿಯಾಗಬೇಕೆಂಬುದು.
 
ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಆ ಪುಟ್ಟ ಪೋರ ಕೊನೆಗೂ ಸ್ವಲ್ಪ ತೃಪ್ತಿ ಪಟ್ಟುಕೊಂಡಿದ್ದಾನೆ. ಒಂದು ದಿನದ ಮಟ್ಟಿಗೆ ಹೈದರಾಬಾದ್‌ನ ಪೊಲೀಸ್ ಮುಖ್ಯಸ್ಥನಾಗುವ ಮೂಲಕ ತನ್ನ ಕೊನೆಯಾಸೆಯನ್ನು ಈಡೇರಿಸಿಕೊಂಡಿದ್ದಾನೆ.
 
ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ತೆಲಂಗಾಣದ ಕರೀಮ್‌ನಗರ ಜಿಲ್ಲೆಯ ಸಾದಿಕ್ ಎಂಬ ಹತ್ತು ವರ್ಷದ ಬಾಲಕನಿಗೆ ಮೊದಲಿನಿಂದಲೂ ಪೊಲೀಸ್ ಅಧಿಕಾರಿಯಾಗುವ ಕನಸು. ಆದರೆ ಆತನಿಗಿರುವ ಮಾರಕ ಕಾಯಿಲೆಗೆ ಆ ಕನಸಿಗೆ ತೊಡಕಾಗಿತ್ತು. ತನ್ನ ಕೊರಗು ಒಂದು ದಿನದ ಮಟ್ಟಿಗಾದರೂ ಈಡೇರಿದ ಖುಷಿ ಸಾಧಿಕ್‌ಗೆ ಇದೆ.
 
ಕಳೆದ ಬುಧವಾರ ಪೊಲೀಸ್ ಸಮವಸ್ತ್ರದೊಂದಿಗೆ, ಲಾಠಿ ಹಿಡಿದು ಹೈದರಾಬಾದ್‌ನ ಪೊಲೀಸ್ ಮುಖ್ಯಸ್ಥರ ಸೀಟಿನಲ್ಲಿ ಕುಳಿತ ಸಾದಿಕ್ ತನ್ನ ಮುದ್ದುಭಾಷೆಯಲ್ಲಿಯೇ ಕಮಿಶನರ್ ಖದರ್ ತೋರಿದ. ಅಧಿಕಾರವನ್ನು ಸ್ವೀಕರಿಸಿ ಸಹಿ ಹಾಕಿ ನೆರೆದಿದ್ದ ವರದಿಗಾರರ ಜತೆ ಮಾತನಾಡಿದ ಆತ ''ನಾನು ರೌಡಿಗಳನ್ನು ಹಿಡಿಯಬೇಕು ಮತ್ತು ಶಾಂತಿಯನ್ನು ಕಾಪಾಡಬೇಕು,' ಎಂದ.  ಆತನ ಆಸೆಗೆ ಸ್ಪಂದಿಸಿ, ಮಾನವೀಯತೆಯನ್ನು ಮೆರೆದ ಪೊಲೀಸ್ ಆಯುಕ್ತ ಮಹೇಂದ್ರ ರೆಡ್ಡಿ ಹಾಗೂ ಇತರೇ ಅಧಿಕಾರಿಗಳು ಆತನಿಗೆ ಸೆಲ್ಯೂಟ್ ಹೊಡೆಯುವ ಮೂಲಕ ಈ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದರು. 
 
ಪುಟ್ಟ ಕಂದನ ಆಶೆ ಈಡೇರಿಸಿ ಮಾನವೀಯತೆ ಮೆರೆದ ಹೈದರಾಬಾದ್ ಪೊಲೀಸರಿಗೆ ನಮ್ಮ ಕಡೆಯಿಂದ ಒಂದು ಸೆಲ್ಯೂಟ್....

Share this Story:

Follow Webdunia kannada