ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ಲಾರಿ ಮೇಲೆ ಹೈ ಟೆನ್ಷನ್ ವಿದ್ಯುತ್ ತಂತಿ ಬಿದ್ದ ಪರಿಣಾಮ 8 ಜನ ದುರ್ಮರವನ್ನಪ್ಪಿ 18 ಮಂದಿ ಗಂಭೀರವಾಗಿ ಗಾಯಗೊಂಡ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಮೆದಕ್ ಜಿಲ್ಲೆಯಲ್ಲಿ ಭಾನುವಾರ ಸಂಜೆ 8ಗಂಟೆ ಸುಮಾರಿಗೆ ಈ ಘಟನ ನಡೆದಿದ್ದು ಮೃತರು ಕಾಮರೆಡ್ಡಿ ಗ್ರಾಮದವರೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದು ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಗಾಯಾಳುಗಳನ್ನು ಸಿಕಂದರಾಬಾದ್‌ನ ಯಶೋಧಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಹಿಂದುಗಡೆ ಕುಣಿಯುತ್ತ, ಹಾಡುತ್ತ ಬರುತ್ತಿದ್ದ ಜನರ ಮುಂದೆಯೇ ಈ ದುರ್ಘಟನೆ ನಡೆದಿದ್ದು ಸಂಬಂಧಿಕರ ಆಂಕ್ರದನ ಮುಗಿಲು ಮುಟ್ಟಿದೆ.
ಮದುವೆ ದಿಬ್ಬಣದ ಲಾರಿಯಲ್ಲಿ ನವ ದಂಪತಿ ಕೂಡ ಇದ್ದರು ಎನ್ನಲಾಗಿದೆ.