ನವದೆಹಲಿ: ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ, ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ನಿನ್ನೆ ರಾತ್ರಿ ದೆಹಲಿಯಲ್ಲಿ ಅವರು ನಿಧನರಾಗಿದ್ದಾರೆ. 1971 ರಿಂದ ಸುಪ್ರೀಂ ಕೋರ್ಟ್ ವಕೀಲರಾಗಿದ್ದ ಅವರು ತಮ್ಮ ವೃತ್ತಿ ಜೀವನದ ಅವಧಿಯಲ್ಲಿ ಅನೇಕ ಪ್ರಮುಖ ಪ್ರಕರಣಗಳನ್ನು ನಿರ್ವಹಿಸಿದ್ದರು. ಅವರ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮ ಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
ಕೇವಲ ವಕೀಲರಾಗಿ ಅಲ್ಲದೆ, ರಾಜ್ಯ ಸಭೆ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. 1999 ರಿಂದ 2005 ರ ಅವಧಿಯಲ್ಲಿ ರಾಜ್ಯ ಸಭೆ ಸದಸ್ಯರಾಗಿದ್ದರು. ಭಾರತೀಯ ವಕೀಲರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 1972-75 ರ ಅವಧಿಯಲ್ಲಿ ಸಾಲಿಸಿಟರ್ ಜನರಲ್ ಆಗಿ ಕರ್ತವ್ಯ ಸಲ್ಲಿಸಿದ್ದರು.
1929 ರಲ್ಲಿ ಮ್ಯಾನ್ಮಾರ್ ನ ಪಾರ್ಸಿ ಕುಟುಂಬದಲ್ಲಿ ಜನಿಸಿದ ನಾರಿಮನ್ 1950 ರಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಧಿಕ್ಕರಿಸಿ ಎಎಎಸ್ ಜಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಕೀಲಿ ವೃತ್ತಿಯ ಭೀಷ್ಮ ಎಂದೇ ಅವರನ್ನು ಕರೆಯಲಾಗುತ್ತಿತ್ತು.
ತಮ್ಮ ಸೇವಾವಧಿಯಲ್ಲಿ ಭೋಪಾಲ್ ನ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿ ಪರವಾಗಿ ವಾದಿಸಿದ್ದರು. ಕೋರ್ಟ್ ಹೊರಗೆ ಈ ಘಟನೆಯಲ್ಲಿ ಸಂತ್ರಸ್ತರಾದವರಿಗೆ ಕಂಪನಿಯಿಂದ ಪರಿಹಾರ ಕೊಡಿಸಲು ನೆರವಾಗಿದ್ದರು. ಬಳಿಕ ಕಂಪನಿ ಪರವಾಗಿ ವಾದಿಸಿದ್ದು ತನ್ನ ತಪ್ಪು ಎಂದೂ ಪಶ್ಚಾತ್ತಾಪ ಪಟ್ಟಿದ್ದರು. ಇದಲ್ಲದೆ ಜಯಲಲಿತಾ ಪ್ರಕರಣ, ನರ್ಮದಾ ಪ್ರಕರಣದಲ್ಲಿ ಗುಜರಾತ್ ಸರ್ಕಾರದ ಪರವಾಗಿ ವಾದಿಸಿದ್ದರು. ದೇಶ ಕಂಡ ಅಪ್ರತಿಮ ನ್ಯಾಯವಾದಿಗಳಲ್ಲಿ ಒಬ್ಬರಾಗಿರುವ ನಾರಿಮನ್ ಇಂದು ಇಹಲೋಕ ತ್ಯಜಿಸಿದ್ದಾರೆ.