ದೇಶದಲ್ಲಿ ಭೃಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯುತ್ತೇನೆ ಎಂದು ಪ್ರಧಾನಿ ಮೋದಿ ಶಪಥಗೈದಿದ್ದಾರೆ. ಕತಾರ್‌ನ ದೋಹಾದಲ್ಲಿ ಭಾನುವಾರ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ದೇಶದಲ್ಲಿ ಹಲವರ ಸಿಹಿಊಟವನ್ನು ನಾನು ನಿಲ್ಲಿಸಿದ್ದೇನೆ. ಇದರಿಂದಾಗಿ ಹಲವು ಸಮಸ್ಯೆಗಳನ್ನೂ ಎದುರಿಸುವಂತಾಯಿತು ನಿಜ. ಆದರೆ ಸರ್ಕಾರಿ ಯೋಜನೆಗಳಲ್ಲಿ ಸೋರಿಕೆ ಮತ್ತು ಕಳ್ಳತನವನ್ನು ತಡೆಗಟ್ಟಿದ್ದರಿಂದ ದೇಶದ ವಾರ್ಷಿಕ 36 ಸಾವಿರ ಕೋಟಿ ರೂಪಾಯಿ ಹಣವನ್ನು ಉಳಿಸಿದ್ದೇನೆ ಎಂದಿದ್ದಾರೆ.
ಕತಾರ್‌ನ ಎರಡು ದಿನದ ಭೇಟಿಯ ಕೊನೆಯಲ್ಲಿ ಆನಿವಾಸಿಗಳ ಜತೆ ಸಮಯ ಕಳೆದ ಅವರು, ನಾವು ಕೇವಲ ಭೃಷ್ಟಾಚಾರದ ಮೇಲ್ಭಾಗವನ್ನು ಶುಚಿಗೊಳಿಸಿದ್ದೇವೆ. ವಿಸ್ತ್ರತವಾದ ಸ್ವಚ್ಛ ಕಾರ್ಯ ಇನ್ನು ಬಾಕಿ ಇದೆ ಎಂದು ಹೇಳಿದ್ದಾರೆ.
ನಾವು ಅನೇಕರ ಸಿಹಿಯೂಟವನ್ನು ತಡೆದಿದ್ದೇವೆ. ಇದಕ್ಕಾಗಿ ನಾನು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಯಿತು. 125 ಕೋಟಿ ಭಾರತೀಯರ ಪ್ರೀತಿ ನನಗೆ ಈ ಎಲ್ಲ ಸಮಸ್ಯೆಗಳನ್ನು ಎದುರಿಸುವ ಶಕ್ತಿ ನೀಡಿತು ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ.
ತಮ್ಮ ಸರ್ಕಾರದ ವಿರುದ್ಧದ ಟೀಕೆಗಳನ್ನವರು ಸಿಹಿ ತಿನ್ನಲು ಕೊಡದ ಅಮ್ಮನ ವಿರುದ್ಧ ಮಗು ಮಾಡಿಕೊಳ್ಳುವ ಕೋಪಕ್ಕೆ ಹೋಲಿಸಿದ್ದಾರೆ.
1.62 ಕೋಟಿ ನಕಲಿ ಪಡಿತರ ಕಾರ್ಡ್ ಪತ್ತೆ ಹಚ್ಚಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅನುದಾನಿತ ಗೋಧಿ, ಅಕ್ಕಿ, ಸೀಮೆಎಣ್ಣೆ ಹಾಗೂ ಎಲ್‌ಪಿಜಿ ದುರ್ಬಳಕೆ, ಸೋರಿಕೆಯನ್ನು ತಡೆಯಲಾಗಿದೆ. ಗೆದ್ದಲಿನಂತೆ ಜೀವಾಧಾರಕಗಳನ್ನು ತಿನ್ನುವುದರ ಮೂಲಕ ಭೃಷ್ಟಾಚಾರ ನಮ್ಮ ದೇಶವನ್ನು ಟೊಳ್ಳಾಗಿಸಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.
< >
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ< >