ಬೆಂಗಳೂರು: ವಿವಾದಿತ ಜ್ಞಾನವಾಪಿ ಮಸೀದಿ ಆವರಣದ ನೆಲಮಹಡಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡುವಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ನೀಡುತ್ತಿದ್ದಂತೇ ಸಾಹಿತಿ ಎಸ್.ಎಲ್. ಭೈರಪ್ಪ ಚೆಂದದ ಸಾಲೊಂದನ್ನು ಬರೆದು ತೀರ್ಪು ಸ್ವಾಗತಿಸಿದ್ದಾರೆ.
ನೆಲಮಹಡಿಯ ನಾಲ್ಕು ಕೊಠಡಿಗಳ ಪೈಕಿ ವ್ಯಾಸ್ ಜಿ ತಹಕಾನದಲ್ಲಿ ಪೂಜೆಗೆ ಅನುಮತಿ ನೀಡಬೇಕೆಂದು ತೀರ್ಪಿನಲ್ಲಿ ಹೇಳಲಾಗಿದೆ. ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಡಾ. ಅಜಯ್ ಕೃಷ್ಣ ವಿಶ್ವೇಶ ನೇತೃತ್ವದ ಪೀಠ ಇಂತಹದ್ದೊಂದು ಮಹತ್ವದ ಅದೇಶ ನೀಡಿದೆ. ಈ ಮೂಲಕ ಸುದೀರ್ಘ ಕಾಲದಿಂದ ನಡೆಯುತ್ತಿದ್ದ ಕಾಶಿ ವಿಶ್ವನಾಥ ದೇವಾಲಯಕ್ಕೆ ಅಂಟಿಕೊಂಡಿದ್ದ ಮಸೀದಿಯ ಒಡೆತದನ ಕುರಿತಂತೆ ಮಹತ್ವದ ಆದೇಶ ಹೊರಬಿದ್ದಂತಾಗಿದೆ. ಆದರೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅಂಜುಮಾನ್ ಇನ್ತೆಜಾಮಿಯ ಮಸೀದಿ ಹೇಳಿದೆ.
ಜ್ಞಾನವಾಪಿ ಮಸೀದಿ ಹಿನ್ನಲೆ
ಸತ್ಯಯುಗದಿಂದಲೂ ಸ್ವಯಂಭೂ ಆದಿ ವಿಶ್ವೇಶ್ವರ ದೇಗುಲವಿತ್ತು ಎಂಬ ನಂಬಿಕೆಯಿದೆ. 1669 ರಲ್ಲಿ ಮೊಘಲ್ ದೊರೆ ಔರಂಗಜೇಬ ದೇಗುಲವನ್ನು ಕೆಡವಿ ಮಸೀದಿ ನಿರ್ಮಿಸಿದ್ದ. ಆದರೆ ಇಲ್ಲಿ ಹಿಂದೂ ದೇವಾಲಯವಿತ್ತು ಎನ್ನುವುದಕ್ಕೆ ಈಗಲೂ ಕೆಲವು ಕುರುಹುಗಳಿವೆ. 1991 ರಲ್ಲಿ ಮೊದಲ ಬಾರಿಗೆ ಪ್ರಕರಣ ಸಂಬಂಧ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇಷ್ಟು ಸುದೀರ್ಘ ಅವಧಿವರೆಗೆ ವಿಚಾರಣೆ ನಡೆದು ಇದೀಗ ತೀರ್ಪು ಬಂದಿದೆ.
ಎಸ್.ಎಲ್. ಭೈರಪ್ಪ ಚೆಂದದ ಒಕ್ಕಣೆ
ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಾಶಿ ವಿಶ್ವೇಶ್ವರನಿಗೆ ಪೂಜೆಗೆ ಅವಕಾಶ ನೀಡಿರುವ ಕೋರ್ಟ್ ತೀರ್ಪಿನ ಬಗ್ಗೆ ಸಾಹಿತಿ ಎಸ್.ಎಲ್. ಭೈರಪ್ಪ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಚೆಂದದ ಸಾಲೊಂದನ್ನು ಬರೆದಿದ್ದಾರೆ. ಅದು ಹೀಗಿದೆ. ಜ್ಞಾನವಾಪಿ ಮಸೀದಿಯು ಆಕ್ರಾಮಕ ಅಹಂಕಾರದ ಪ್ರತೀಕವೆಂಬಂತೆ ಅಡರಿ ನಿಂತಿತ್ತು. ತನ್ನ ದಡದಲ್ಲಿ ಅಡರಿಕೊಂಡಿರುವ ಅದರ ಪರಿವಿಯೇ ಇಲ್ಲವೆಂಬಂತೆ ನದಿಯು ನಿಂತಿತ್ತು. ಗಂಗೆ ಸದ್ದು ಮಾಡುವ ನದಿಯಲ್ಲ, ನಿಶ್ಯಬ್ಧವಾಗಿ ಒಳಗೇ ಚಲಿಸುವ ಸಂಸ್ಕೃತಿ ಎಂದು ಬರೆದಿದ್ದಾರೆ.