ಹೆಣ್ಣುಮಕ್ಕಳ ಅನಾಥಾಶ್ರಮದಲ್ಲಿ 10 ವರ್ಷದೊಳಗಿನ ಆರು ಬಾಲಕಿಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದಲ್ಲದೇ ಅದರ ವಿಡಿಯೋ ಕೂಡಾ ಮಾಡಲಾಗಿದೆ ಎಂದು ದೂರು ದಾಖಲಿಸಿದ ನಂತರ ಅನಾಥಾಶ್ರಮದ ಮುಖ್ಯಸ್ಥನನ್ನು ಪೊಲೀಸರು ಬಂಧಿಸಿದ್ದಾರೆ.
ಸರಕಾರಿ ಸಂಚಾಲಿತ ಅನಾಥಶ್ರಮದ ಮುಖ್ಯಸ್ಥ ಆರ್.ಎಸ್.ಮೀನಾ ಎನ್ನುವ ವ್ಯಕ್ತಿ ಅನಾಥಶ್ರಮದಲ್ಲಿದ್ದ 10 ವರ್ಷದೊಳಗಿನ ಬಾಲಕಿಯರ ಮೇಲೆ ಪ್ರತಿನಿತ್ಯ ಲೈಂಗಿಕ ದೌರ್ಜನ್ಯ ಎಸಗುವುದಲ್ಲದೇ ತನ್ನ ಹೇಯ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಬಾಲಕಿಯರ ಹೇಳಿಕೆಗಳನ್ನು ದಾಖಲಿಸಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಸಾಬೀತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸತೀಶ್ ಕೈನ್ ತಿಳಿಸಿದ್ದಾರೆ.
ಅನಾಥಾಶ್ರಮದಲ್ಲಿ 10 ವರ್ಷದೊಳಗಿನ 50 ಬಾಲಕಿಯರು ವಾಸವಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಮೀನಾ ಬಾಲಕಿಯರನ್ನು ತಪಾಸಣೆಗಾಗಿ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗುತ್ತಿದ್ದುದಲ್ಲದೇ ಯಾರಿಗಾದರೂ ಹೇಳಿದಲ್ಲಿ ಅನಾಥಾಶ್ರಮದಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಬಾಲಕಿಯೊಬ್ಬಳು ತನಗೆ ಪರಿಚಯವಿರುವವರಿಗೆ ಆರೋಪಿಯ ವರ್ತನೆ ಬಗ್ಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.