Select Your Language

Notifications

webdunia
webdunia
webdunia
webdunia

ಅಮ್ಮ ತಮ್ಮ ಕುಟುಂಬದವರನ್ನು ದೂರವಿಟ್ಟಿದ್ಯಾಕೆ? : ನೋವು ಬಿಚ್ಚಿಟ್ಟ ಜಯಾ ಸಹೋದರಿ ಪುತ್ರಿ

ಅಮ್ಮ ತಮ್ಮ ಕುಟುಂಬದವರನ್ನು ದೂರವಿಟ್ಟಿದ್ಯಾಕೆ? : ನೋವು ಬಿಚ್ಚಿಟ್ಟ ಜಯಾ ಸಹೋದರಿ ಪುತ್ರಿ
ಬೆಂಗಳೂರು , ಮಂಗಳವಾರ, 13 ಡಿಸೆಂಬರ್ 2016 (13:01 IST)
ಜಯಲಲಿತಾ ತಮ್ಮ ಕುಟುಂಬದಿಂದ ದೂರವಿರಲು ಅವರ ಗೆಳತಿ ಶಶಿಕಲಾಳೇ ಕಾರಣ ಎಂದು ಜಯಾ ಸಹೋದರಿ ಶೈಲಜಾ ಪುತ್ರಿ ಅಮೃತಾ ನೇರವಾಗಿ ಆರೋಪಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ಅವರು ಹಂಚಿಕೊಂಡ ಸಂಗತಿಗಳು ಇಂತಿವೆ:
 
 *ನನಗೆ 16 ವರ್ಷವಿದ್ದಾಗ ಅವರು ನನ್ನ ದೊಡ್ಡಮ್ಮ ಎಂದು ತಿಳಿದು ಬಂತು. ಆಮೇಲೆ ನಾನು ಅವರನ್ನು ಭೇಟಿಯಾದೆ. ಕಂಡಕೂಡಲೇ ನನ್ನನ್ನು ಒಪ್ಪಿಕೊಂಡ ಅವರು ಆಗಾಗ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರ ಬಗ್ಗೆ ಕೇಳಿದಾಗ ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ಆದರೆ ಈಗ ಬೇಡ ಎಂದು ಸುಮ್ಮನಾಗುತ್ತಿದ್ದರು. ಆದರೆ ತಾವು ಇಲ್ಲಿ ಪಂಜರದ ಗಿಣಿ ಎಂದು ಹೇಳುತ್ತಿದ್ದರು. 
 
*ತಮ್ಮ ಜತೆಗೆ ಯಾರು ಕೂಡ ಇಲ್ಲದಿದ್ದ ಸಮಯದಲ್ಲಿ ಮಾತ್ರ ಅವರು ಫೋನ್ ಕರೆ ಮಾಡುತ್ತಿದ್ದರು. ಆದರೆ ಹೆಚ್ಚು ಹೊತ್ತು ಮಾತನ್ನಾಡುತ್ತಿರಲಿಲ್ಲ. ಮಾತನ್ನಾಡುತ್ತಿದ್ದವರು ಒಂದೇ ಸಲ ಕಟ್ ಮಾಡಿ ಬಿಡುತ್ತಿದ್ದರು. ಬಹುಶಃ ಯಾರಾದರೂ ಬಂದರೆ ಅವರು ಹಾಗೆ ಮಾಡುತ್ತಿರಬೇಕು. ಆದರೆ ಅವರು ಸಂತೋಷದಿಂದ ಮಾತನಾಡಿದ್ದೇ ಇಲ್ಲ. ಕಣ್ಣೀರಿಡುತ್ತ ಫೋನ್ ಕಟ್ ಮಾಡುತ್ತಿದ್ದರು.

webdunia
*ಮನೆಯಲ್ಲಿ ಎಂದಿಗೂ ಭೇಟಿಯಾಗುತ್ತಿರಲಿಲ್ಲ. ಕಚೇರಿಗೆ ಬಂದು ಭೇಟಿಯಾಗು ಎನ್ನುತ್ತಿದ್ದರು. ಆದರೆ ಅಲ್ಲಿ ಸಹ 2 ನಿಮಿಷ ಮಾತನಾಡುವಷ್ಟರಲ್ಲಿ ನನ್ನ ನೋಡಿದ್ದು ಸಾಕು. ಮರಳು ಎನ್ನುತ್ತಿದ್ದಳು. ಅದರಲ್ಲೂ ನಾನು ಅವರಂತೆ ಇರುವುದರಿಂದ ನಮ್ಮ ಸಂಬಂಧ ಬಹಿರಂಗವಾಗಬಹುದೆಂಬ ಭೀತಿ ಅವರಿಗಿತ್ತು.
 
 *ಕಂಡಾಗಲೆಲ್ಲ ನನ್ನ ಅಪ್ಪಿ ಮುದ್ದಾಡುತ್ತಿದ್ದರು. ಅವರಿಗೆ ನನ್ನ ಕಂಡರೆ ತುಂಬ ಪ್ರೀತಿ. ಆದರೆ ನಮ್ಮ ಪ್ರಾಣಕ್ಕೆ ಅಪಾಯವಾಗಬಹುದೆಂಬ ಭಯ ಅವರಿಗಿತ್ತು. ಹೀಗಾಗಿ ನಮ್ಮನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. 
 
 *ಶಶಿಕಲಾ ಅವರೇ ನಮ್ಮ ಕುಟುಂಬ ನೆಮ್ಮದಿ ಕಳೆದುಕೊಳ್ಳಲು ಕಾರಣ. ನಮ್ಮನ್ನು ಅಮ್ಮ ದೂರವಿಟ್ಟಿದ್ದು ಅವರಿಂದಾಗಿಯೇ. ಶಶಿಕಲಾ ಅಮ್ಮನ ಬದುಕಿನಲ್ಲಿ ಇಲ್ಲದಿದ್ದರೆ, ಅಥವಾ ಅವರು ಒಳ್ಳೆಯ ಮನಸ್ಸಿವನಾಗಿದ್ದರೆ ನಾವು ಈ ರೀತಿ ಗೋಳಾಡುವ ಸ್ಥಿತಿ ಬರುತ್ತಿರಲಿಲ್ಲ. 
 
*ಅವರನ್ನು ಕಾಣಲು ಹೋದಾಗ ಅಮ್ಮ ಮನೆಯಲ್ಲಿಲ್ಲ, ಚಿನ್ನಮ್ಮ ( ಶಶಿಕಲಾ) ಹೇಳಿದ್ದಾರೆ ಎಂದು ವಾಪಸ್ ಕಳುಹಿಸಲಾಗುತ್ತಿತ್ತು. 
 
 * ಅಮ್ಮನ ಆಸ್ತಿ ಶಶಿಕಲಾ ಅವರಿಗೆ ಸೇರಲು ನಾನಂತೂ ಬಿಡುವುದಿಲ್ಲ. ಹೋರಾಡುತ್ತೇನೆ. ನನ್ನ ಕುಟುಂಬವದವರ ಬೆಂಬಲ ನನಗಿದೆ. ನನ್ನ ದೊಡ್ಡಪ್ಪ (ಜಯಾ ತಂದೆಯ ಮೊದಲ ಪತ್ನಿ ಮಗ) ಸೇರಿದಂತೆ ಎಲ್ಲರೂ ನನ್ನ ಬೆಂಬಲಕ್ಕಿದ್ದಾರೆ.  ಅದು ತಮಿಳುನಾಡಿನ ಜನರಿಗೆ ಸೇರಲಿ. ನನಗೇನೂ ಆಸ್ತಿ ಮೇಲೆ ಕಣ್ಣಿಲ್ಲ. ನಾನೇ ದುಡಿದು 10 ಜನರಿಗೆ ಊಟಕ್ಕೆ ಹಾಕುವ ಸಾಮರ್ಥ್ಯವಿದೆ. ಈ ಮೊದಲು ಅವರು ಏನು ಬೇಕಾದರೂ ಕೇಳು ಎಂದು ಹೇಳುತ್ತಿದ್ದರು. ಆದರೆ ನನಗೆ ಬೇಕಾಗಿದ್ದುದು ಅವರ ಪ್ರೀತಿ-ವಿಶ್ವಾಸವಾಗಿತ್ತು. ಆಸ್ತಿ ಅಲ್ಲ. ಹೀಗಾಗಿ ನಾನು ನಿರಾಕರಿಸುತ್ತಿದ್ದೆ. 
 
 * ಜಯಾ ಅವರಿಗೆ ಮಕ್ಕಳಿಲ್ಲ, ತಮ್ಮವರೆಂಬುವವರು ಯಾರು ಇಲ್ಲ. ಮತ್ಯಾಕೆ ಅವರಿಗೆ ರಾಜಕೀಯ ಎಂದು ವಿರೋಧ ಪಕ್ಷದವರೊಬ್ಬರು  ಪ್ರಶ್ನಿಸಿದಾಗ, ಅವರಿಗೆ ನಾವಿದ್ದೇವೆ ಎಂದು ತೋರಿಸಲು ನಮ್ಮ ಅಮ್ಮ, ತಾವು ಜಯಾ ತಂಗಿ ಎಂದು ಮುಂದೆ ಬಂದರು. ಇಲ್ಲದಿದ್ದರೆ ಅವರು ಸಾರ್ವಜನಿಕವಾಗಿ ತಾವು ಜಯಾ ಸಹೋದರಿ ಎಂಬುದನ್ನು ಹೇಳಿಕೊಳ್ಳುತ್ತಿರಲಿಲ್ಲವೆನೋ. ತಮ್ಮ ಸಂಬಂಧವನ್ನು ಸಾಬೀತು ಪಡಿಸಲು ಅವರು ಡಿಎನ್‌ಎ ಪರೀಕ್ಷೆಗೂ ಸಹ ಸಿದ್ಧ ಎಂದಿದ್ದರು. 
 
 *ಎಲ್ಲರೂ ನಾನು ಅವರ ಹಾಗೆ ಇದ್ದೇನೆ ಎಂದು ಹೇಳುತ್ತಾರೆ. ಮೊನ್ನೆ ಅವರ ಅಂತ್ಯ ಸಂಸ್ಕಾರದ ಸಮಯದಲ್ಲಿ ಕೂಡ ಜನರು ನೀವು ಅಮ್ಮನ ಮಗಳೇ ಎಂದು ಕೇಳಿದರು. 
 
 * ನಾನು ಅವರ ಜತೆ ಮಾತನಾಡಿದ್ದು ಕಳೆದ ಎರಡು ವರ್ಷಗಳ ಹಿಂದೆ. ಆಸ್ಪತ್ರೆಯಲ್ಲಿ ದಾಖಲಾದ ಸುದ್ದಿ ಕೇಳಿ ಮೂರು ಬಾರಿ ಹೋದೆ. ಆದರೆ ಅವರು ಇಲ್ಲಿಲ್ಲ ಎಂದು ಹೇಳಿ ನನ್ನನ್ನು ವಾಪಸ್ ಕಳುಹಿಸಲಾಯಿತು. ಅವರ ಪಾರ್ಥಿವ ಶರೀರ ನೋಡಲು ಹೋದಾಗ ಸಹ ಡಿಎಂಕೆ ನಾಯಕರೊಬ್ಬರು ಸಹಾಯ ಮಾಡಿದರು. 
 
ತಮ್ಮ ಸಂಪ್ರದಾಯಂತೆ ಅಮ್ಮನಿಗೆ ಅಂತ್ಯಸಂಸ್ಕಾರ ಮಾಡಲಿಲ್ಲ. ಕೊನೆಯ ಬಾರಿ ಅವರನ್ನು ನೋಡಲಾಗಲಿಲ್ಲ ಎಂದು ಅಮೃತಾ ನೋವು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಸಲೀಲೆ ಆರೋಪಿ ಸಚಿವ ಮೇಟಿಯಿಂದ ಪರಮೇಶ್ವರ್ ಭೇಟಿ