Select Your Language

Notifications

webdunia
webdunia
webdunia
webdunia

ಪ್ರತಿಪಕ್ಷಗಳ ಬೆವರಿಳಿಸಿದ ಸ್ಮೃತಿ ಇರಾನಿ

ಪ್ರತಿಪಕ್ಷಗಳ ಬೆವರಿಳಿಸಿದ ಸ್ಮೃತಿ ಇರಾನಿ
ನವದೆಹಲಿ , ಗುರುವಾರ, 25 ಫೆಬ್ರವರಿ 2016 (17:23 IST)
ಜೆಎನ್‌ಯು ಪ್ರಕರಣ, ರೋಹಿತ್‌ ವೇಮುಲ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದೊಂದು ತಿಂಗಳಿಂದ ಸರ್ಕಾರದ ಮೇಲೆ ಸಮರ ಸಾರಿದ್ದ ವಿರೋಧ ಪಕ್ಷಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಲೋಕಸಭೆಯಲ್ಲಿ ಸ್ಮತಿ ಇರಾನಿಯವರ ದಿಟ್ಟ ಭಾಷಣ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ತಮ್ಮ ಟ್ವಿಟರ್‌ನಲ್ಲಿ ಸ್ಮೃತಿಯವರನ್ನು ಶ್ಲಾಘಿಸಿ ಅವರ ಭಾಷಣವನ್ನು ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ 'ಸತ್ಯಮೇವ ಜಯತೇ' ಎಂದು ಬರೆದಿದ್ದಾರೆ. 
 
ಸಂಸತ್ತಿನಲ್ಲಿ ಬುಧವಾರ ಆಕ್ರಮಣಾಕಾರಿ ನೀತಿಯನ್ನು ಅನುಸರಿಸಿದ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಪ್ರಕರಣವನ್ನು ರಾಜಕೀಕರಣಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. 
 
ಲೋಕಸಭೆಯ ಪ್ರಥಮ ದಿನದ ಕಾರ್ಯಕಲಾಪ ಬಿಸಿ ಚರ್ಚೆಗೆ ಸಾಕ್ಷಿಯಾಯಿತು. ವೇಮುಲಾ ಆತ್ಮಹತ್ಯೆ ಮತ್ತು ಪ್ರಸಕ್ತ ನಡೆಯುತ್ತಿರುವ ಜೆಎನ್‌ಯು ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು. ಅದಕ್ಕೆ ಪ್ರತಿಯಾಗಿ ಬಿಜೆಪಿ ರಾಹುಲ್ ಗಾಂಧಿ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ರಾಷ್ಟ್ರ ವಿರೋಧಿಗಳ ಜತೆಯಲ್ಲಿ ವೇದಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿತು. 
 
ಚರ್ಚೆಗೆ ಉತ್ತರ ನೀಡಲು ಎದ್ದು ನಿಂತ ಸ್ಮೃತಿ ಇರಾನಿ ರಾಹುಲ್ ವಿರುದ್ಧ ಕಿಡಿಕಾರಿದರು. ರೋಹಿತ್ ವೇಮುಲ ಪ್ರಕರಣದಲ್ಲಿ ರಾಹುಲ್ ರಾಜಕೀಯ ಸಮಯ ಸಾಧಕತೆಯನ್ನು ತೋರಿಸುತ್ತಿದ್ದಾರೆ. ತಾವು ಮತ್ತು ಬಿಜೆಪಿ ಸರ್ಕಾರ ಶಿಕ್ಷಣವನ್ನು ಕೇಸರಿಕರಣಗೊಳಿಸುತ್ತಿದ್ದಾರೆ ಎಂಬ ಆರೋಪಗಳಿಗೆ ಉತ್ತರಿಸಿದ ಅವರು ಈಗ ವಿವಿಗಳಲ್ಲಿರುವ ಬಹುತೇಕ ಕುಲಪತಿಗಳು ಯುಪಿಎ ಅಧಿಕಾರವಧಿಯಲ್ಲಿ ನೇಮಕವಾದವರು. ನಾನು ವಿಪಕ್ಷಗಳಿಗೆ ಸವಾಲು ಹಾಕುತ್ತೇನೆ. ನಾನೆಲ್ಲಿಯಾದರೂ ಕೇಸರೀಕರಣ ಮಾಡುತ್ತಿದ್ದೇನೆಂದು ಒಬ್ಬ ವಿಸಿ ಹೇಳಿದ್ದೇ ಆದಲ್ಲಿ ನಾನು ರಾಜಕೀಯವನ್ನೇ ತೊರೆಯುತ್ತೇನೆ. ನನ್ನ ಹೆಸರು ಸ್ಮೃತಿ ಇರಾನಿ, ತಾಕತ್ತಿದ್ದರೆ ನನ್ನ ಜಾತಿ ಹೇಳಿ ಎಂದೂ ಪ್ರತಿಪಕ್ಷಗಳಿಗೆ ಸ್ಮೃತಿ ಸವಾಲು ಹಾಕಿದರು.
 
ಮಕ್ಕಳನ್ನು ಮತ ಬ್ಯಾಂಕ್‌‌ನಂತೆ ಕಾಣಬೇಡಿ. ಈ ದೇಶದ ಭವಿಷ್ಯವಾಗಿರುವ ಅವರಿಗೆ ದೇಶವನ್ನು ಕಟ್ಟಲು ನೆರವು ನೀಡಿ. ಬದಲಾಗಿ ದೇಶವನ್ನು ಕೆಡವಲು ಯತ್ನಿಸಬೇಡಿ ಎಂದು ಅವರು ಗುಡುಗಿದ್ದಾರೆ.

Share this Story:

Follow Webdunia kannada