ಪ್ರಧಾನಿ ಮೋದಿ ದೇಶಕ್ಕೆ ಬೆದರಿಕೆಯನ್ನೊಡ್ಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ.
ಡಿಸೆಂಬರ್ 31 ರಂದು ಉತ್ತರ ಪ್ರದೇಶದಲ್ಲಿ ಮೋದಿ ನೀಡಿದ್ದ ಪ್ರಚಾರ ಭಾಷಣವನ್ನು ಉಲ್ಲೇಖಿಸಿ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ಭಾಷಣ ಮಾಡಿದಾಗಲೆಲ್ಲ ಮೋದಿ ದೇಶಕ್ಕೆ ಮತ್ತು ದೇಶದ ಜನರಿಗೆ ಬೆದರಿಕೆ ಒಡ್ಡುವ ಪ್ರಯತ್ನ ಮಾಡುತ್ತಾರೆ. ನೀವು ಡಿಸೆಂಬರ್ 31 ರ ಭಾಷಣವನ್ನೇ ಪರಿಗಣಿಸಿ ನೋಡಿ, ಅವರು ಜನರಿಂದ ಆಯ್ಕೆಯಾದ ಪ್ರತಿನಿಧಿ ಎಂದು ಅನ್ನಿಸುವುದೇ ಇಲ್ಲ. ದೇಶಕ್ಕೆ ಬೆದರಿಕೆ ಒಡ್ಡುವ ಆಕ್ರಮಣಕಾರನ ಹಾಗೆ ಕಾಣಿಸುತ್ತಾರೆ, ಎಂದಿದ್ದಾರೆ.
ದೇಶ ಮತ್ತು ದೇಶದ ಜನರಿಗೆ ಬೆದರಿಕೆ ಒಡ್ಡುವ ಪ್ರಧಾನ ಮಂತ್ರಿಯನ್ನು ಎಲ್ಲಾದರೂ ಕಂಡಿದ್ದೀರಾ? ಬಡವರ ಖಾತೆಗಳಲ್ಲಿ ಠೇವಣಿಯಾಗಿರುವ ಹಣ ಶ್ರೀಮಂತರು ಕೊಟ್ಟಿದ್ದಾಗಿರಬಾರದು. ಪ್ರತಿ ಬಡವ ಕಳ್ಳ ಮತ್ತು ಅವರ ಬ್ಯಾಂಕ್ ಖಾತೆ ಬಾಡಿಗೆಯದ್ದು ಎಂದು ಅವರು ಅಂದುಕೊಂಡಿದ್ದಾರೆಯೇ? ಎಂದು ತಿವಾರಿ ಪ್ರಶ್ನಿಸಿದ್ದಾರೆ.
ತಮ್ಮ ಮಾತುಗಳನ್ನು ಮುಂದುವರೆಸಿದ ಅವರು, ಕೆಲವು ಪಕ್ಷಗಳು ಧರ್ಮ, ಜಾತಿಯ ಮೇಲೆ, ಮತ್ತೀಗ ಬಡವ, ಶ್ರೀಮಂತನೆಂಬ ಆಧಾರದ ಮೇಲೆ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ.ಮೋದಿ ಇತರರಲ್ಲಿ ಲೋಪವನ್ನು ಕಂಡುಕೊಳ್ಳಬಲ್ಲರು. ಆದರೆ ಕನ್ನಡಿಯಲ್ಲಿ ತಮ್ಮನ್ನು ತಾವು ಎದುರಿಸಲು ಅವರಿಗೆ ಧೈರ್ಯವಿಲ್ಲ ಎಂದಿದ್ದಾರೆ .
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.