Select Your Language

Notifications

webdunia
webdunia
webdunia
webdunia

ಬಿಜೆಪಿ ರಾಷ್ಟ್ರೀಯ ವಕ್ತಾರರ ವಿರುದ್ಧ ಪ್ರಧಾನಿ ಮೋದಿ ತೀವ್ರ ಅಸಮಾಧಾನ

ಬಿಜೆಪಿ ರಾಷ್ಟ್ರೀಯ ವಕ್ತಾರರ ವಿರುದ್ಧ ಪ್ರಧಾನಿ ಮೋದಿ ತೀವ್ರ ಅಸಮಾಧಾನ
ನವದೆಹಲಿ , ಬುಧವಾರ, 3 ಫೆಬ್ರವರಿ 2016 (15:18 IST)
ಬಿಜೆಪಿ ಪಕ್ಷದ ರಾಷ್ಟೀಯ ವಕ್ತಾರರು ಸರಕಾರದ ಮಹತ್ವದ ಯೋಜನೆಗಳನ್ನು ದೇಶದ ಜನತೆಗೆ ತಲುಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಎನ್‌ಡಿಎ ಸರಕಾರದ ಮಹತ್ವದ ಯೋಜನೆಗಳಾದ ಜನ ಧನ ಯೋಜನಾ, ಬೆಳೆ ವಿಮೆ ಮತ್ತು ಪಿಂಚಣಿ ಯೋಜನೆಗಳ ಬಗ್ಗೆ ಜನತೆಗೆ ಮಾಹಿತಿ ತಲುಪಿಸದೆ, ವಿಪಕ್ಷಗಳು ಹೆಣೆದ ಬಲೆಯೊಳಗೆ ಸಿಲುಕಿ ಅಸಹಿಷ್ಣುತೆ, ಕೋಮುವಾದಿಕರಣದಂತಹ ವಿಷಯಗಳ ಬಗ್ಗೆ ರಾಷ್ಟ್ರೀಯ ವಕ್ತಾರರು ಹೆಚ್ಚು ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಬಿಜೆಪಿ, ಅಲ್ಪಸಂಖ್ಯಾತ ವಿರೋಧಿ ಮತ್ತು ತಲಿತ ವಿರೋಧಿ ಎನ್ನುವ ಆರೋಪಗಳಿಗೆ ಗುರಿಯಾಗುತ್ತಿದೆ ಎಂದು ಸಿಡಿಮಿಡಿಗೊಂಡರು. 
 
ಕಳೆದ 19 ತಿಂಗಳುಗಳಲ್ಲಿ ಬಿಜೆಪಿ ನೇತತ್ವದ ಎನ್‌ಡಿಎ ಸರಕಾರ ಮಾಡಿದ ಸಾಧನೆಗಳನ್ನು ರಾಷ್ಟ್ರೀಯ ವಕ್ತಾರರು ಮಾಧ್ಯಮಗಳಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಾಗ ಸರಿಯಾಗಿ ವಿವರಣೆ ನೀಡುವಲ್ಲಿ ವಿಫಲವಾಗುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ.
 
ಕೇಂದ್ರ ಸರಕಾರ, ರೈತರಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದ ಯೋಜನೆಗಳ ಬಗ್ಗೆ ರಾಷ್ಟ್ರೀಯ ವಕ್ತಾರರು ಚರ್ಚಿಸುತ್ತಿಲ್ಲ ಎಂದು ಕಿಡಿಕಾರಿದರು.
 
ಟೆಲಿವಿಜನ್ ಚಾನೆಲ್‌ಗಳಲ್ಲಿ ಬಿತ್ತರವಾಗುವ ಚರ್ಚಾಕೂಟದಲ್ಲಿ ಬಿಜೆಪಿ ವಕ್ತಾರರಿಗೆ ವಿಪಕ್ಷಗಳು ಮಾತ್ರವಲ್ಲ. ಚರ್ಚಾಕೂಟದ ತಜ್ಞರು ಕೂಡಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮೋದಿ ಸರಕಾರದ ಸಾಧನೆಯನ್ನು ಹೇಳುವ ಬದಲು ಅಲ್ಪಸಂಖ್ಯಾತ ವಿರೋಧಿ, ದಲಿತ ವಿರೋಧಿ ಎನ್ನುವ ಪಟ್ಟ ಕಟ್ಟಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕರು ಗುಡುಗಿದ್ದಾರೆ.
 
ಯುಪಿಎ-2 ಸರಕಾರಕ್ಕೆ ಹೋಲಿಸಿದಲ್ಲಿ ಎನ್‌ಡಿಎ ಸರಕಾರದ ಅಧಿಕಾರವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎನ್ನುವುದಕ್ಕೆ ಮಾತ್ರ ಬಿಜೆಪಿ ನಾಯಕರ ಹೇಳಿಕೆ ಸೀಮಿತವಾಗಿದೆ. ಆದರೆ, ವಿಪಕ್ಷಗಳು ಕೋಮುವಾದಿ ವಿಷಯಗಳು ಮತ್ತು ದಲಿತ ವಿರೋಧ ವಿಷಯಗಳನ್ನು ಎತ್ತಿಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ ಎಂದರು.

Share this Story:

Follow Webdunia kannada