ತೀವ್ರ ಜ್ವರದಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರ ಆರೋಗ್ಯ ಚೇತರಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥಿಸಿದ್ದಾರೆ.
ವಾರಾಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ರೋಡ್ ಶೋ ನಡೆಸುತ್ತಿದ್ದ ಸೋನಿಯಾ ಗಾಂಧಿ ಅಸ್ವಸ್ಥರಾಗಿದ್ದರಿಂದ ಅರ್ಧಕ್ಕೆ ನಿರ್ಗಮಿಸಿದ್ದರು.
ವಾರಣಾಸಿ ಭೇಟಿ ಸಂದರ್ಭದಲ್ಲಿ ಸೋನಿಯಾ ಅವರು ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಕೇಳಿದೆ. ಅವರ ಶೀಘ್ರ ಚೇತರಿಕೆ ಮತ್ತು ಉತ್ತಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಉತ್ತರಪ್ರದೇಶದಲ್ಲಿ 2017ರಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಕಳೆದ ಮೂರು ದಶಕಗಳಿಂದ ಅಧಿಕಾರಕ್ಕೇರಲು ವಿಫಲವಾಗಿರುವ ಕಾಂಗ್ರೆಸ್ ಈ ಬಾರಿಯಾದರೂ ಶತಾಯಗತಾಯ ಅಧಿಕಾರ ಗಿಟ್ಟಿಸಬೇಕೆಂಬ ಪ್ರಯತ್ನದಲ್ಲಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಪ್ರಚಾರದಲ್ಲಿ ತೊಡಗಿರುವ ಸೋನಿಯಾ ಗಾಂಧಿ ನಿನ್ನೆ ಪ್ರಧಾನಿ ಮೋದಿ ಪ್ರತಿನಿಧಿಸುವ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಬೃಹತ್ ರೋಡ್ ಶೋಗೆ ಚಾಲನೆ ನೀಡಿದ್ದರು. ಆದರೆ ಮಾರ್ಗ ಮಧ್ಯದಲ್ಲಿಯೇ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಅಲ್ಲಿಂದ ನಿರ್ಗಮಿಸಿದ್ದರು.
ಗಾಂಧಿ ವೈರಲ್ ಜ್ವರದಿಂದ ನರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಸಂಜೆ ಸೋನಿಯಾ ಗಾಂಧಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಬೇಕಿತ್ತು. ಆದರೆ ಅನಾರೋಗ್ಯದಿಂದಾಗಿ ದೆಹಲಿಗೆ ವಾಪಸ್ಸಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟ ಪಡಿಸಿವೆ.
ಮೋದಿ ಪ್ರಧಾನಿಯಾದ ಬಳಿಕ ಸೋನಿಯಾ ಅವರ ಮೊದಲ ವಾರಣಾಸಿ ಭೇಟಿ ಇದಾಗಿದೆ.