Select Your Language

Notifications

webdunia
webdunia
webdunia
webdunia

ಮಾಜಿ ಲೋಕಸಭಾ ಸ್ಪೀಕರ್ ಪಿ.ಎ. ಸಂಗ್ಮಾ ವಿಧಿವಶ

ಮಾಜಿ ಲೋಕಸಭಾ ಸ್ಪೀಕರ್ ಪಿ.ಎ. ಸಂಗ್ಮಾ ವಿಧಿವಶ
ನವದೆಹಲಿ , ಶುಕ್ರವಾರ, 4 ಮಾರ್ಚ್ 2016 (12:39 IST)
ಮಾಜಿ ಲೋಕಸಭಾ ಸ್ಪೀಕರ್, ಹಿರಿಯ ಸಂಸದೀಯ ಪಟು, ಮೇಘಾಲಯದ ಮಾಜಿ ಮುಖ್ಯಮಂತ್ರಿ ಪಿ. ಎ. ಸಂಗ್ಮಾ ಶುಕ್ರವಾರ ಮುಂಜಾನೆ ವಿಧಿವಶರಾಗಿದ್ದಾರೆ. 68 ವರ್ಷದ ಹಿರಿಯ ನಾಯಕ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ಮರಣವನ್ನಪ್ಪಿದ್ದಾರೆ. ಮೇಘಾಲಯದ ಗಾರೋ ಹಿಲ್ಸ್ ಜಿಲ್ಲೆಯಲ್ಲಿರುವ ಚಪಾಹಟಿ ಗ್ರಾಮದ ಬಡ ಕುಟುಂಬವೊಂದರಲ್ಲಿ 1947 ಸಪ್ಟೆಂಬರ್ 1ರಂದು ಅವರು ಜನಿಸಿದ್ದರು. 
 
ಹಿಂದುಳಿದ ರಾಜ್ಯದ ಹಳ್ಳಿಯಲ್ಲಿ ಜನಿಸಿದ್ದ ಸಂಗ್ಮಾ ಸ್ಪೀಕರ್‌ನಂತಹ ಉನ್ನತ ಸ್ಥಾನವನ್ನು ಅಲಂಕರಿಸಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದರು. 
 
ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಅಧ್ಯಾಪಕರಾಗಿ, ವಕೀಲರಾಗಿ ಅವರು ಕಾರ್ಯ ನಿರ್ವಹಿಸಿದ್ದರು.ಮೇಘಾಲಯದ ಮಾಜಿ ಮುಖ್ಯಮಂತ್ರಿಯಾಗಿದ್ದ (1988-1990) ಸಂಗ್ಮಾ ಅವರು 8 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.ತಮ್ಮ 49ನೇ ವಯಸ್ಸಿನಲ್ಲಿ 16 ನೇ ಲೋಕಸಭಾ ಸ್ಪೀಕರ್ (1996- 1998) ಸ್ಥಾನಕ್ಕೇರಿದ ಸಂಗ್ಮಾ , ಅತೀ ಕಿರಿಯ ವಯಸ್ಸಿನ ಸ್ಪೀಕರ್ ಎಂಬ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. 
 
ಸೋನಿಯಾ ಗಾಂಧಿ ಅವರ ವಿದೇಶ ಪೌರತ್ವವನ್ನು ಖಂಡಿಸಿ ಕಾಂಗ್ರೆಸ್ ತೊರೆದಿದ್ದ ಸಂಗ್ಮಾ 1999ರಲ್ಲಿ  ಶರದ್ ಪವಾರ್ ಜತೆ ಎನ್‌ಸಿಪಿ ಕಟ್ಟಿದರು. ಅಲ್ಲಿಂದ ಕೂಡ ಹೊರನಡೆದು ಮಮತಾ ಬ್ಯಾನರ್ಜಿ ಜತೆ ಸೇರಿ ನ್ಯಾಷನಲಿಸ್ಟ್ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. 
 
ಈಶಾನ್ಯ ರಾಜ್ಯದ ಅಭಿವೃದ್ಧಿಗೆ ಟೊಂಕ ಕಟ್ಟಿ ದುಡಿದಿದ್ದ ಅವರು 2012- 13ರಲ್ಲಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ  ಪ್ರಮುಖ ರಾಜಕೀಯ ಪಕ್ಷಗಳು ಅವರಿಗೆ ಬೆಂಬಲ ನೀಡದಿದ್ದುದರಿಂದ ಸೋಲನ್ನು ಕಂಡಿದ್ದರು. 
 
ಹಿರಿಯ ನಾಯಕನ ನಿಧನಕ್ಕೆ ಲೋಕಸಭೆಯಲ್ಲಿ ಶ್ರಂದ್ಧಾಂಜಲಿ ಸಲ್ಲಿಸಲಾಗಿದೆ. ಸಂತಾಪ ಸೂಚನೆ ಮಂಡಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದ್ದಾರೆ. ಮುಂದಿನ ಮಂಗಳವಾರ ಮತ್ತೆ ಕಲಾಪ ಆರಂಭವಾಗಲಿದೆ.

Share this Story:

Follow Webdunia kannada