500 ಮತ್ತು 1000 ರೂಪಾಯಿಗಳ ನೋಟಿನ ನಿಷೇಧದಿಂದಾಗಿ ಜನರು ಎದುರಿಸುತ್ತಿರುವ ಸಮಸ್ಯೆಗಳು 10 ದಿನಗಳೊಳಗೆ ಪರಿಹರಿಸಲ್ಪಡಲಿವೆ ಎಂದಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ವಿರೋಧ ಪಕ್ಷಗಳು ವೃಥಾ ಕೋಲಾಹಲವನ್ನು ಸೃಷ್ಟಿ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.
ಕಪ್ಪುಹಣದ ವಿರುದ್ಧ ಪ್ರಧಾನಿ ಐತಿಹಾಸಿಕ ನಡೆಯನ್ನಿಟ್ಟಿದ್ದಾರೆ. ಇದನ್ನು ಜೀರ್ಣಿಸಿಕೊಳ್ಳಲು ವಿರೋಧ ಪಕ್ಷಗಳಿಗೆ ಕಷ್ಟವಾಗುತ್ತಿದ್ದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ನಾಯ್ಡು ಗುಡುಗಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಹ ಹರಿಹಾಯ್ದ ಅವರು, ಟಿಎಂಸಿ ನಡೆಸಿದ ಪ್ರತಿಭಟನಾ ಮೆರವಣಿಗೆಗೆ ಮೋದಿ ಪರ ಘೋಷಣೆಯೊಂದಿಗೆ ಸ್ವಾಗತಿಸಲ್ಪಟ್ಟಿತು ಎಂದು ವ್ಯಂಗ್ಯವಾಡಿದ್ದಾರೆ.
ಈ ನಡೆಯನ್ನು ಹಿಂಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕಿದ ಅವರು, ಈ ನಿರ್ಧಾರವನ್ನು ಹಿಂಪಡೆಯಲು ಮಮತಾ ಒತ್ತಾಯಿಸುತ್ತಿರುವುದು ಕೇವಲ ಅವರ ಜನಪ್ರಿಯತೆಯನ್ನು ತಗ್ಗಿಸಲಿದೆ ಎಂದು ಹೇಳಿದ್ದಾರೆ.
ನೋಟು ನಿಷೇಧದ ಮಾಹಿತಿ ಮೊದಲೇ ಸೋರಿಕೆಯಾಗಿತ್ತು ಎಂಬುದನ್ನು ಬದಿಗಿಟ್ಟು ಮಾತನಾಡಿದ ಅವರು ಕೇಂದ್ರದ ಈ ಕ್ರಾಂತಿಕಾರಿ ನಡೆಯನ್ನು ಐಎಮ್ಎಫ್, ವಿಶ್ವ ಬ್ಯಾಂಕ್ ಮತ್ತು ಬ್ರಿಕ್ಸ್ ಬ್ಯಾಂಕ್‌ಗಳ ಪ್ರಶಂಸೆಗೆ ಒಳಗಾಗಿದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ