Select Your Language

Notifications

webdunia
webdunia
webdunia
webdunia

ಅತ್ಯಾಚಾರ ಪ್ರಕರಣದಲ್ಲಿ ರಾಜಿ ಸಲ್ಲ, ಹೆಣ್ಣಿನ ದೇಹ ಆಕೆಯ ಮಂದಿರ

ಅತ್ಯಾಚಾರ ಪ್ರಕರಣದಲ್ಲಿ ರಾಜಿ ಸಲ್ಲ, ಹೆಣ್ಣಿನ ದೇಹ ಆಕೆಯ ಮಂದಿರ
ನವದೆಹಲಿ , ಬುಧವಾರ, 1 ಜುಲೈ 2015 (16:00 IST)
ಅತ್ಯಾಚಾರ ಪೀಡಿತೆಗೆ ಅತ್ಯಾಚಾರಿಯ ಜತೆಯಲ್ಲಿ ರಾಜಿ ಮಾಡಿಕೊಳ್ಳುವಂತೆ ಸೂಚಿಸುವುದು ಸರ್ವಥಾ ತಪ್ಪು ಎಂದು ಸುಪ್ರೀಂಕೋರ್ಟ್‌ ಹೇಳಿದೆ. 
 
ಮಹಿಳೆಯ ದೇಹ ಆಕೆಗೆ ಮಂದಿರವಿದ್ದಂತೆ. ಅಲ್ಲಿ ಮಧ್ಯಸ್ಥಿಕೆ ವಹಿಸುವುದು, ಸಂಧಾನ ನಡೆಸುವುದು ಸಲ್ಲ ಎಂದು ಉನ್ನತ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 
 
ಪೀಡಿತೆಯನ್ನು ಮದುವೆಯಾಗುವ ಒಪ್ಪಂದದ ಮೇಲೆ ಆರೋಪಿಯನ್ನು ಖುಲಾಸೆಗೊಳಿಸಿದ ಕೆಳ ಹಂತದ ನ್ಯಾಯಾಲಯದ ತೀರ್ಮಾನ ದೋಷಪೂರಿತ ಮತ್ತು ಸೂಕ್ಷ್ಮ ಸಂವೇದನೆ ಇಲ್ಲದ್ದು. ಅತ್ಯಾಚಾರದಂತಹ ಪ್ರಕರಣದಲ್ಲಿ ಕೋರ್ಟ್ ಅಪರಾಧಿ ಪರ ಮೆದು ಧೋರಣೆಯನ್ನು ತಾಳಬಾರದು. ರೇಪ್ ಪ್ರಕರಣದಲ್ಲಿ ಸಂಧಾನವೆನ್ನುವುದು ಮಹಿಳೆಯ ಗೌರವಕ್ಕೆ ವಿರುದ್ಧವಾದುದು ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ಪೀಠ  ಹೇಳಿದೆ.  
 
ಅತ್ಯಾಚಾರದ ಆರೋಪವನ್ನೆದುರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕೆಳ ಹಂತದ ನ್ಯಾಯಾಲಯ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಮಧ್ಯಪ್ರದೇಶ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿರುವ ಸುರ್ಪೀಂಕೋರ್ಟ್ ಈ ಮೇಲಿನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದೆ. 
 
ಅತ್ಯಾಚಾರಿಗೆ ಸಂತ್ರಸ್ತೆ ಜತೆ ರಾಜಿ ಮಾಡಿಕೊಳ್ಳಲು ಹೇಳಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದ್ದ ಪ್ರಕರಣ ನಡೆದು ಕೆಲವೇ ವಾರಗಳಲ್ಲಿ ಸುಪ್ರೀಂನ ಈ ದೃಷ್ಟಿಕೋನ ಹೊರಬಿದ್ದಿದೆ.  
 
2008ರಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ವಿ ಮೋಹನ್ ಎಂಬಾತನಿಗೆ 7 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಅತ್ಯಾಚಾರದಿಂದಾಗಿ ಬಾಲಕಿ ಗರ್ಭಿಣಿಯಾಗಿದ್ದು ಆಕೆಗೀಗ 6 ವರ್ಷದ ಮಗಳಿದ್ದಾಳೆ. ತನ್ನಿಂದ ಅನ್ಯಾಯಕ್ಕೊಳಗಾದವಳನ್ನು ವರಿಸುತ್ತೇನೆ. ಸಂಧಾನಕ್ಕೆ ಅವಕಾಶ ಮಾಡಿಕೊಡಿ ಎಂದು ಮೋಹನ್ ಸಲ್ಲಿಸಿದ್ದ ಅರ್ಜಿಯನ್ನು ಪುರಷ್ಕರಿಸಿದ್ದ ಹೈಕೋರ್ಟ್ ಆತನಿಗೆ ರಾಜಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲು ಮಧ್ಯಂತರ ಜಾಮೀನನ್ನು ನೀಡಿತ್ತು. 
 
ಆದರೆ ಪೀಡಿತೆ ಕೋರ್ಟ್ ಸೂಚನೆಯನ್ನು ತಳ್ಳಿ ಹಾಕಿ ಆತನ ಜತೆ ರಾಜಿ ಮಾಡಿಕೊಳ್ಳಲು, ಮಾತನಾಡಲು, ಮದುವೆಯಾಗಲು ತಾನು ಒಪ್ಪುವುದಿಲ್ಲ ಎಂದಿದ್ದಳು. 

Share this Story:

Follow Webdunia kannada