ನವದೆಹಲಿ: ಕೇಂದ್ರದಲ್ಲಿ ಸರ್ಕಾರ ರಚಿಸಲು ಸರ್ಕಸ್ ಮಾಡುತ್ತಿರುವ ಬಿಜೆಪಿ ಈಗ ಮಿತ್ರಪಕ್ಷಗಳ ಸಭೆ ಕರೆದಿದೆ. ಎನ್ ಡಿಎ ಸಭೆಗೆ ಹಾಜರಾಗಲು ದೆಹಲಿಗೆ ಬಂದಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಬೇಡಿಕೆಗಳ ಪಟ್ಟಿಯನ್ನೇ ತಂದಿದ್ದಾರೆ.
ಬಿಜೆಪಿಗೆ ಸರ್ಕಾರ ರಚಿಸಲು ಈಗ ಟಿಡಿಪಿ ಮತ್ತು ಜೆಡಿಯು ಬೆಂಬಲ ಅನಿವಾರ್ಯ. ಟಿಡಿಪಿ ಈಗಾಗಲೇ ತನ್ನ ಬೇಡಿಕೆ ಸಲ್ಲಿಸಿದ್ದು, ಎನ್ ಡಿಎಗೆ ತನ್ನ ಬೆಂಬಲ ಎಂದು ಘೋಷಣೆ ಮಾಡಿದೆ. ಇದೀಗ ದೆಹಲಿಗೆ ತಲುಪಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಕೂಡಾ ಬೇಡಿಕೆಯ ಉದ್ದ ಪಟ್ಟಿಯೊಂದಿಗೇ ಬಂದಿದ್ದಾರೆ ಎನ್ನಲಾಗಿದೆ.
ಎನ್ ಡಿಎ ಸಭೆಯಲ್ಲಿ ನಿತೀಶ್ ಪತ್ರದ ಮುಖೇನ ಬೇಡಿಕೆ ಸಲ್ಲಿಸಲಿದ್ದಾರೆ. ಚಂದ್ರಬಾಬು ನಾಯ್ಡುವಿನಂತೆ ನಿತೀಶ್ ಕೂಡಾ ಬಿಹಾರಕ್ಕೆ ವಿಶೇಷ ಸ್ಥಾನ ಮಾನ ಬೇಡಿಕೆಯಿಡಲಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದಲ್ಲಿ ದೊಡ್ಡ ಸ್ಥಾನಕ್ಕೆ ಬೇಡಿಕೆಯಿಡಬಹುದು.
ಕೇವಲ ಜೆಡಿಯು ಮತ್ತು ನಿತೀಶ್ ಮಾತ್ರವಲ್ಲ, ಇತರೆ ಮಿತ್ರಪಕ್ಷಗಳೂ ಈಗ ತಮ್ಮ ಬೇಡಿಕೆ ಪಟ್ಟಿ ಸಲ್ಲಿಸುತ್ತಿದ್ದಾರೆ. ಬಿಜೆಪಿಗೆ ಈಗ ಮಿತ್ರ ಪಕ್ಷಗಳ ಸಹಕಾರವಿಲ್ಲದೇ ಸರ್ಕಾರ ರಚನೆ ಸಾಧ್ಯವಿಲ್ಲ. ಹೀಗಾಗಿ ಅದನ್ನೇ ಲಾಭ ಮಾಡಿಕೊಂಡಿರುವ ಪಕ್ಷಗಳು ಕೇಂದ್ರದಲ್ಲಿ ಒಂದೊಂದೇ ಹುದ್ದೆಗೆ ಬೇಡಿಕೆ ಮಂಡಿಸುತ್ತಿದ್ದಾರೆ.