ಉರಿ ಸೇನಾಶಿಬಿರದ ಮೇಲಿನ ದಾಳಿ ಕಾಶ್ಮೀರದಲ್ಲಿನ ಪರಿಸ್ಥಿತಿಗೆ ಅಲ್ಲಿನ ಜನರ ಪ್ರತಿಕ್ರಿಯೆಯಾಗಿರಬಹುದು ಎನ್ನುವುದರ ಮೂಲಕ ಪಾಕ್ ಪ್ರಧಾನಿ ನವಾಜ್ ಷರೀಫ್ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಕಾಶ್ಮೀರ ಸಮಸ್ಯೆಯಲ್ಲಿ ಭಾರತವನ್ನು ಸಿಕ್ಕಿ ಹಾಕಿಸಲು ವಿಶ್ವಸಂಸ್ಥೆಯಲ್ಲಿ ಅವರು ಮಾಡಿದ ಪ್ರಯತ್ನ ವಿಫಲವಾದ ಬಳಿಕ ಸಹ ಭಾರತವನ್ನೇ ಆರೋಪಿಯಾಗಿಸುವ ಮೂರ್ಖತನವನ್ನು ಮುಂದುವರೆಸಿರುವ ಷರೀಫ್, ಯಾವುದೇ ಸಾಕ್ಷ್ಯಾಧಾರವಿಲ್ಲದೇ ಭಾರತ ಪಾಕ್ ವಿರುದ್ಧ ದೋಷಾರೋಪಣೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗವಹಿಸಿ ತಮ್ಮ ತವರಿಗೆ ಮರಳುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಲಂಡನ್‌ನಲ್ಲಿ ಮಾತನ್ನಾಡುತ್ತಿದ್ದ ಷರೀಫ್, ಉರಿ ದಾಳಿ ಕಾಶ್ಮೀರದಲ್ಲಿ ಸೇನೆ ನಡೆಸುತ್ತಿರುವ ದಬ್ಬಾಳಿಕೆಗೆ ಅಲ್ಲಿನವರು ನೀಡಿರುವ ಪ್ರತಿಕ್ರಿಯೆಯಾಗಿರಬಹುದು. ಕಳೆದ 2 ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರದಿಂದ ಸಾವನ್ನಪ್ಪಿದ, ಬಾಧಿತರಾದವರ ಸಂಬಂಧಿಗಳು, ಪ್ರೀತಿಪಾತ್ರರು ತಮ್ಮ ಆಕ್ರೋಶವನ್ನು ಈ ರೀತಿಯಲ್ಲಿ ಹೊರಹಾಕಿರಬಹುದು ಎಂದು ಹೇಳಿದ್ದಾರೆ.
ಯಾವುದೇ ತನಿಖೆ, ಪುರಾವೆ ಇಲ್ಲದೆ, ಪಾಕಿಸ್ತಾನದ ವಿರುದ್ಧ ಆರೋಪಿಸಿರುವ ಭಾರತ "ಬೇಜವಾಬ್ದಾರಿ ರೀತಿಯಲ್ಲಿ" ವರ್ತಿಸಿದೆ. ದಾಳಿ ನಡೆದ ಗಂಟೆಯೊಳಗೆ ನಮ್ಮ ಮೇಲೆ ಗೂಬೆ ಕೂರಿಸಿದರೆ ಏನರ್ಥ ಎಂದು ಪಾಕ್ ಮಾಧ್ಯಮಗಳ ಜತೆ ಮಾತನಾಡುತ್ತಿದ್ದ ಷರೀಫ್ ಹೇಳಿದ್ದಾರೆ.