Select Your Language

Notifications

webdunia
webdunia
webdunia
webdunia

ಮೋದಿ ಇವರ ಕನಸನ್ನು ಹಾಳುಗೆಡವಿದ್ದಾರಂತೆ!

ಮೋದಿ ಇವರ ಕನಸನ್ನು ಹಾಳುಗೆಡವಿದ್ದಾರಂತೆ!
ನವದೆಹಲಿ , ಸೋಮವಾರ, 31 ಆಗಸ್ಟ್ 2015 (16:03 IST)
ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ನಿವೃತ್ತ ಸೇನಾಯೋಧರಿಗೆ ತಮ್ಮ ಬೆಂಬಲವನ್ನು ಮುಂದುವರೆಸಿರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿ, 'ಒಂದು ಶ್ರೇಣಿ ಒಂದು ಪಿಂಚಣಿ' ಯೋಜನೆ ಅನುಷ್ಠಾನಕ್ಕೆ ವಿಳಂಬವಾಗುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದು ಪ್ರಧಾನಿ ಮೋದಿಯವರು ನನ್ನ ಕನಸುಗಳನ್ನು ವಿಫಲಗೊಳಿಸಿದ್ದಾರೆ ಎಂದು ಅಸಮಾಧಾನವನ್ನು ಹೊರ ಹಾಕಿದ್ದಾರೆ. 

 
78 ದಿನಕ್ಕೆ ಕಾಲಿಟ್ಟ ಮಾಜಿ ಸೈನಿಕರ ಧರಣಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಮಾಜಿ ಸೈನಿಕರ ಬೇಡಿಕೆಗಳಿಗೆ ಸ್ಪಂದಿಸದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮತ್ತು 'ಒಂದು ಶ್ರೇಣಿ ಒಂದು ಪಿಂಚಣಿ ' ಯೋಜನೆಯ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿದರು. 
 
'ನಾನು ಮೋದಿಯವರ ಮೇಲೆ ಇಟ್ಟಿದ್ದ ಭರವಸೆ, ಕನಸನ್ನು ಅವರು ಸಂಪೂರ್ಣವಾಗಿ ನಾಶ ಮಾಡಿದ್ದಾರೆ', ಎಂದು ಜೇಠ್ಮಲಾನಿ ಹತಾಶೆಯನ್ನು ವ್ಯಕ್ತ ಪಡಿಸಿದ್ದಾರೆ.
 
'ದುರದೃಷ್ಟವಶಾತ್, ಈ ರಾಜಕಾರಣಿಗಳು ಇಡೀ ರಾಷ್ಟ್ರಕ್ಕೆ ಆಶಾಭಂಗವನ್ನುಂಟು ಮಾಡಿದ್ದಾರೆ. ನಾನು ಸಹ ಒಬ್ಬ ರಾಜಕಾರಣಿ ಎಂದು ಹೇಳಿಕೊಳ್ಳಲು ನನಗೆ ನಾಚಿಕೆಯಾಗುತ್ತಿದೆ. ಆದರೆ ತಮ್ಮ ಸ್ನೇಹಿತರನ್ನು ಮತ್ತು ದೇಶದ ಜನರನ್ನು ಮರೆಯುವಂತಹ ರಾಜಕಾರಣಿಗಳ ಸಾಲಲ್ಲಿ ನಾನಿಲ್ಲ', ಎಂದ ಅವರು ತಾವು  ವಿಭಿನ್ನ ರಾಜಕಾರಣಿ ಎಂದು ಒತ್ತಿ ಹೇಳಿದ್ದಾರೆ. 
 
ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರೂ ಬಿಜೆಪಿಯಿಂದ ಹೇಗೆ ತನ್ನನ್ನು ಹೊರಗಿರಿಸಲಾಯಿತು ಎಂಬುದನ್ನು ಸಹ ಅವರು ನೆರೆದವರ ಮುಂದೆ ವಿವರಿಸಿದರು. 
 
ಮಾಜಿ ಸೈನಿಕರ ಪ್ರತಿಭಟನೆ ಇಂದು 78ನೇ ದಿನಕ್ಕೆ ಕಾಲಿಟ್ಟಿದ್ದು, 'ಒಂದು ಶ್ರೇಣಿ ಒಂದು ಪಿಂಚಣಿ', ಅನುಷ್ಠಾನಕ್ಕೆ ಉಪವಾಸ ಧರಣಿ ಕುಳಿತಿರುವ ಮಾಜಿ ಹಿರಿಯ ಸೇನಾಧಿಕಾರಿಗಳೊಬ್ಬರು ನಿನ್ನೆ ವೇದಿಕೆಯಲ್ಲಿಯೇ ಕುಸಿದು ಬಿದ್ದಿದ್ದರು. 

Share this Story:

Follow Webdunia kannada