ನನ್ನ "ಜನ-ಕೇಂದ್ರಿತ" ಮಾದರಿ ಆಡಳಿತ ದೇಶದ ಬೆರಳೆಣಿಕೆಯಷ್ಟು ಶ್ರೀಮಂತರ ಸುತ್ತ ಸುತ್ತುವ ಪ್ರಧಾನಿ ನರೇಂದ್ರ ಮೋದಿ ಮಾದರಿ ಆಡಳಿತಕ್ಕಿಂತ ಉತ್ಕೃಷ್ಟವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ.
ತಾವು ಪಕ್ಷದೊಳಗಿನ ಕದನಗಳಿಗೆ ಗಮನ ನೀಡುತ್ತಿಲ್ಲ. ಬದಲಾಗಿ ಆಡಳಿತದ ಕಡೆ ದೃಷ್ಟಿ ಹರಿಸಿದ್ದೇನೆ ಎಂದು ಒತ್ತಿ ಹೇಳಿದ ಕೇಜ್ರಿವಾಲ್, "ಅಧಿಕಾರಕ್ಕೆ ಬಂದ ನಂತರ ನನ್ನ "ನಿಜವಾದ ಹೋರಾಟ", ಆಡಳಿತಶಾಹಿಗಳ ವಿರುದ್ಧ ಎಂಬುದು ಅರಿವಾಯಿತು. ಈ ಕಾರಣಕ್ಕಾಗಿ ಪ್ರಮುಖ "ರಚನಾತ್ಮಕ" ಬದಲಾವಣೆಗಳನ್ನು ತರುವತ್ತ ತತ್ಪರನಾಗಿದ್ದೇನೆ", ಎಂದಿದ್ದಾರೆ.
"ಆಡಳಿತ ಸ್ವೀಕಾರದ ತುದಿಯಲ್ಲಿರುವ ವ್ಯಕ್ತಿ ಮಾತ್ರ ಉತ್ತಮ ಆಡಳಿತ ಯಾವುದೆಂದು ನಿರ್ಧರಿಸಬಲ್ಲ. ದೆಹಲಿ ಚುನಾವಣೆ ಸಮಯದಲ್ಲಿ ಜನರ ಮುಂದೆ ಆಡಳಿತದ ಎರಡು ಮಾದರಿಗಳಿದ್ದವು. ಒಂದು 49 ದಿನಗಳ ಕೇಜ್ರಿವಾಲ್ ಮಾದರಿ, ಇನ್ನೊಂದು 8 ತಿಂಗಳುಗಳ ಮೋದಿ ಮಾದರಿ. ನಮಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 67 ಸೀಟುಗಳನ್ನು ನೀಡುವುದರ ಮೂಲಕ ಜನರು ಕೇಜ್ರಿವಾಲ್ ಮಾದರಿಯ ಆಡಳಿತ ಉತ್ತಮ ಎಂದು ನಿರ್ಧರಿಸಿದ್ದಾರೆ", ಎಂದು ಅವರು ಹೇಳಿದ್ದಾರೆ.
"ನಮ್ಮ ಆಡಳಿತದ ಮಾದರಿಯಲ್ಲಿ ಜನಸಾಮಾನ್ಯ ಕೇಂದ್ರ ಸ್ಥಾನದಲ್ಲಿದ್ದಾನೆ. ಆದರೆ ಮೋದಿಯವರ ಆಡಳಿತದ ಮಾದರಿಯಲ್ಲಿ ದೇಶದ ಬೆರಳೆಣಿಕೆಯಷ್ಟು ಶ್ರೀಮಂತರಿಗೆ ಆದ್ಯತೆ ನೀಡಲಾಗುತ್ತದೆ. ನಾವು ಸಾಮಾನ್ಯ ನಾಗರಿಕನಿಗಾಗಿ ಯೋಜನೆ ರೂಪಿಸುತ್ತೇವೆ. ಮೋದಿ ಸರಕಾರ ಸಿರಿವಂತರ ಪರವಾಗಿ ಯೋಜನೆಗಳನ್ನು ತರುತ್ತದೆ", ಎಂದು ಅವರು ಆರೋಪಿಸಿದರು.