Select Your Language

Notifications

webdunia
webdunia
webdunia
webdunia

ದಂಗೆಯನ್ನು ಸೃಷ್ಟಿಸಿದ ಶಾಸಕನಿಗೆ ಝಡ್‌’ ಶ್ರೇಣಿ ಭದ್ರತೆ ನೀಡಿದ ಕೇಂದ್ರ ಸರಕಾರ

ದಂಗೆಯನ್ನು ಸೃಷ್ಟಿಸಿದ ಶಾಸಕನಿಗೆ ಝಡ್‌’ ಶ್ರೇಣಿ ಭದ್ರತೆ ನೀಡಿದ ಕೇಂದ್ರ ಸರಕಾರ
ನವದೆಹಲಿ , ಬುಧವಾರ, 27 ಆಗಸ್ಟ್ 2014 (12:39 IST)
ಮುಜಫ್ಫರ್‌ನಗರ ಗಲಭೆ ಆರೋಪಿ, ಬಿಜೆಪಿಯ ಶಾಸಕ ಸಂಗೀತ್‌ ಸೋಮ್‌ ಅವರಿಗೆ ಕೇಂದ್ರ ಸರ್ಕಾರ ‘ಝಡ್‌’ ಶ್ರೇಣಿಯ ಭದ್ರತೆ ಒದಗಿಸಿರುವುದನ್ನು ವಿರೋಧ ಪಕ್ಷಗಳು ಟೀಕಿಸಿವೆ. ಕೇಂದ್ರದ ಈ ನಡೆ ‘ಹತ್ಯೆಗೆ ಲೈಸೆನ್ಸ್‌’ ನೀಡಿದಂತೆ ಎಂದು ಕಾಂಗ್ರೆಸ್‌ ಹೇಳಿದೆ.
 
ಉತ್ತರಪ್ರದೇಶದ ಸಾರ್ಧಾನ ಕ್ಷೇತ್ರದ ಶಾಸಕರಾಗಿರುವ ಸೋಮ್‌ ಅವರ ಮೇಲೆ ಉಗ್ರರು ಕಣ್ಣಿಟ್ಟಿರುವ ಸಂಭವವಿದೆ ಎಂಬ ಗುಪ್ತಚರ ಮಾಹಿತಿಯ ಆಧಾರದಲ್ಲಿ ಅವರಿಗೆ  ಕೇಂದ್ರ ಅರೆಸೇನಾ ಪಡೆಯ (ಸಿಆರ್‌ಪಿಎಫ್‌) ರಕ್ಷಣೆ ಒದಗಿಸಲು ಗೃಹ ಸಚಿವಾಲಯ ನಿರ್ಧರಿಸಿದೆ.
 
‘ಗಲಭೆಯ ಸಂತ್ರಸ್ತರು ನ್ಯಾಯಕ್ಕಾಗಿ ಪರದಾಡುತ್ತಿದ್ದರೆ ಆರೋಪಿಗಳು ‘ಝಡ್‌’ ಶ್ರೇಣಿಯ ಭದ್ರತೆ ಪಡೆಯುತ್ತಿದ್ದಾರೆ. ಮನೆಗಳು ಬೆಂಕಿಗಾಹುತಿಯಾಗಿ  ಸಂಕಷ್ಟಕ್ಕೊಳಗಾಗಿರುವ ಜನರ ಮುಂದೆ ಇದಕ್ಕಿಂತ ದೊಡ್ಡ  ವಿಡಂಬನೆ ಇರಲಾರದು’ ಎಂದು ಕಾಂಗ್ರೆಸ್‌ ವಕ್ತಾರ ಮನೀಶ್‌ ತಿವಾರಿ ಹೇಳಿದ್ದಾರೆ.
 
‘ಕೇಂದ್ರ ಸರ್ಕಾರ ಒದಗಿಸಿರುವ ಭದ್ರತೆ ಶಾಸಕ ಸೋಮ್‌ಗಲ್ಲ, ಕೊಲೆಗಡುಕರಿಗೆ ಒದಗಿಸಿರುವ ಭದ್ರತೆ’ ಎಂದು ಜೆಡಿ (ಯು) ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಟೀಕಿಸಿದ್ದಾರೆ.
 
ಆದರೆ ತನ್ನ ನಿಲುವನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಅಗತ್ಯ ಸಾಕ್ಷ್ಯಗಳ ಆಧಾರದಲ್ಲಿ ಈ ಕ್ರಮ ಕೈಗೊಂಡಿದೆ. ಇದಕ್ಕೂ ಮೊದಲು ಉತ್ತರ ಪ್ರದೇಶ ಸರ್ಕಾರ ಅಲ್ಲಿನ ಹೈಕೋರ್ಟ್‌ ನಿರ್ದೇಶನದಂತೆ ಸೋಮ್‌ ಅವರಿಗೆ ‘ವೈ’ ಶ್ರೇಣಿಯ ಭದ್ರತೆ ಒದಗಿಸಿತ್ತು’ ಎಂದು ಬಿಜೆಪಿ ವಕ್ತಾರ ಸಂಬೀತ್‌ ಪಾತ್ರ ಹೇಳಿದ್ದಾರೆ.

Share this Story:

Follow Webdunia kannada