Select Your Language

Notifications

webdunia
webdunia
webdunia
webdunia

ಕೋಮುಗಲಭೆ ಭಯದಿಂದ ಸಾವಿಗೆ ಶರಣಾದ ಹಿಂದೂ-ಮುಸ್ಲಿಂ ಯುವ ಪ್ರೇಮಿಗಳು

ಕೋಮುಗಲಭೆ ಭಯದಿಂದ ಸಾವಿಗೆ ಶರಣಾದ ಹಿಂದೂ-ಮುಸ್ಲಿಂ ಯುವ ಪ್ರೇಮಿಗಳು
ಮುಝಪ್ಪರ್‌ನಗರ , ಮಂಗಳವಾರ, 5 ಮೇ 2015 (17:49 IST)
ಸದಾ ಕೋಮುಗಲಭೆಗಳಿಂದ ಗುರುತಿಸಲ್ಪಡುವ ಮುಝಪ್ಪರ್‌ನಗರದಲ್ಲಿ ಪ್ರೀತಿಪ್ರೇಮದಲ್ಲಿ ಬೀಳುವುದೆಂದರೆ ಯುವಕ-ಯುವತಿಯರ ಪಾಲಿಗೆ ಆತಂಕದ ವಿಚಾರ. ಅದರಲ್ಲೂ ಪ್ರೇಮಪಾಶಕ್ಕೆ ಸಿಲುಕಿದವರು ಹಿಂದೂ ಮತ್ತು ಮುಸ್ಲಿಂ ಧರ್ಮದವರಾಗಿದ್ದರಂತೂ ತಮ್ಮ ಪ್ರೀತಿಯನ್ನು ಮುಂದುವರೆಸಲು ಸಾವಿರ ಬಾರಿ ಯೋಚಿಸುತ್ತಾರೆ. ಆದರೆ ಪ್ರೀತಿ ಎನ್ನುವುದು ಹೇಳಿ ಕೇಳಿ ಬರುವುದಿಲ್ಲ. ಈ ಇಬ್ಬರು ಯುವಪ್ರೇಮಿಗಳಿಗಾಗಿದ್ದು ಅದೇ. ಪರಸ್ಪರ ಗಾಢವಾಗಿ ಪ್ರೀತಿಸತೊಡಗಿದ 18 ವರ್ಷದ ಇಮ್ರಾನ್ ಬಾನೋ ಮತ್ತು 21 ವರ್ಷದ ರಜನೀಶ್ ಕುಮಾರ್ ಕದ್ದು ಮುಚ್ಚಿ ಭೇಟಿಯಾಗಲು ಪ್ರಾರಂಭಿಸಿದ್ದರು. 

ತಮ್ಮ ಸಂಬಂಧಿಕರು ಮತ್ತು ಸಮಾಜ ಮುಂದೊಂದು ದಿನ ತಮ್ಮನ್ನು ಒಪ್ಪಿಕೊಳ್ಳುತ್ತದೆ ಎಂಬುದು ಅವರ ದೂರದಾಸೆಯಾಗಿತ್ತು. ಆದರೆ  2013ರಲ್ಲಾದ ಕೋಮುಗಲಭೆ 59 ಜನರ ಸಾವಿಗೆ ಮತ್ತು 50,000 ಜನರನ್ನು ನಿರಾಶ್ರಿತರನ್ನಾಗಿಸುವಂತೆ ಮಾಡಿದ್ದು ಅವರನ್ನು ಪದೇ ಪದೇ ಕಾಡಿದೆ. 
 
ತಾವಿಬ್ಬರು ಮದುವೆಯಾದರೆ ಮತ್ತೆ ಅದೇ ರೀತಿಯ ಕೋಮುಗಲಭೆ ಮರುಕಳಿಸಬಹುದೆಂದು ಬೆದರಿದ ಪ್ರೇಮಿಗಳು ಅವಸರದ ನಿರ್ಧಾರವನ್ನು ತಳೆದರು. ಪರಸ್ಪರ ಅಗಲಿರಲು ಸಾಧ್ಯವಾಗದಿದ್ದುದರಿಂದ ನಿಂಬೆ ಹಣ್ಣಿನ ಮರವೊಂದಕ್ಕೆ ಒಂದೇ ದುಪಟ್ಟಾವನ್ನು ನೇಣಾಗಿ ಬಿಗಿದುಕೊಂಡು ಅವರಿಬ್ಬರು ಸಾವಿಗೆ ಶರಣಾದರು. 
 
ಶನಿವಾರದಿಂದ ಅವರಿಬ್ಬರು ನಾಪತ್ತೆಯಾಗಿದ್ದರು ಎಂದು ಯುವತಿಯ ಪೋಷಕರು ತಿಳಿಸಿದ್ದಾರೆ. ಯುವತಿಯ ಕುಟುಂಬಕ್ಕೆ ಸೇರಿದ ತೋಟದಲ್ಲಿರುವ ಮರದಲ್ಲಿ ಅವರಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
 
ಘಟನೆ ನಡೆದ ಸ್ಥಳದಲ್ಲಿ ಎರಡು ಸಮುದಾಯದ ಸಾವಿರಾರು ಜನರು ಜಮಾ ಆಗಿದ್ದರಿಂದ, ಯಾವುದೇ ಕ್ಷಣದಲ್ಲಿ ಗ್ರಾಮ ಹೊತ್ತಿ ಉರಿಯುವ ಭಯದಿಂದ ಭಾರೀ ಸಂಖ್ಯೆಯ ಪೊಲೀಸರನ್ನು ಸ್ಥಳದಲ್ಲಿ ನೇಮಿಸಲಾಗಿದೆ. 

Share this Story:

Follow Webdunia kannada