Select Your Language

Notifications

webdunia
webdunia
webdunia
webdunia

ಉದ್ಯೋಗ ಕೊಡಿಸ್ತಿನಿ ಅಂತ ಪ್ರಾಮೀಸ್ ಮಾಡಿ ಕೈಗೆ ಪೊರಕೆ ಕೊಟ್ಟ ಮೋದಿ: ರಾಹುಲ್ ಲೇವಡಿ

ಉದ್ಯೋಗ ಕೊಡಿಸ್ತಿನಿ ಅಂತ ಪ್ರಾಮೀಸ್ ಮಾಡಿ ಕೈಗೆ ಪೊರಕೆ ಕೊಟ್ಟ ಮೋದಿ: ರಾಹುಲ್ ಲೇವಡಿ
ಚೈಬಾಸಾ , ಶನಿವಾರ, 29 ನವೆಂಬರ್ 2014 (14:20 IST)
''ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಮೋದಿ, ಯುವಕರ ಕೈಗೆ ಪೊರಕೆ ಕೊಟ್ಟಿದ್ದಾರೆ,'' ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

''ಲೋಕಸಭೆ ಚುನಾವಣೆ ವೇಳೆ ನಾನೊಬ್ಬನೇ ಉದ್ಯೋಗ ಸೃಷ್ಟಿಸುತ್ತೇನೆ. ಕೈಗಾರಿಕೆ ಸ್ಥಾಪಿಸುತ್ತೇನೆ. ರಸ್ತೆ, ವಿಮಾನ ನಿಲ್ದಾಣಗಳ ನಿರ್ಮಾಣ ಮಾಡುತ್ತೇನೆ ಎಂದೆಲ್ಲ ಮೋದಿ ಹೇಳಿಕೊಂಡಿದ್ದರು. ಆದರೆ ಆಡಳಿತದ ಚುಕ್ಕಾಣಿ ಹಿಡಿದ ನಂತರ ನೀವು ( ನಾಗರಿಕರು) ಪೊರಕೆ ಹಿಡಿಯಿರಿ, ನಾನು ಆಸ್ಟ್ರೇಲಿಯಾಗೆ ಹೋಗುತ್ತೇನೆ ಎಂದರು,'' ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
 
ಮೋದಿಯವರನ್ನು '10 ಉದ್ಯಮಿಗಳ ಪ್ರಧಾನಿ' ಎಂದು ಕಿಚಾಯಿಸಿದ ರಾಹುಲ್, ನಮಗೆ ಬೇಕಿರುವುದು ಅಭಿವೃದ್ಧಿ ಮೇಲೆ ದೃಷ್ಟಿ ನೆಟ್ಟ ಸರಕಾರ, ಧೂಳು ಗುಡಿಸಲು ತತ್ಪರವಾದ ಸರಕಾರವಲ್ಲ ಎಂದು ಹೇಳಿದ್ದಾರೆ. 
 
''ಆರ್‌ಟಿಐ, ನರೇಗಾ ಮತ್ತು ಭೂಸ್ವಾದೀನ ವಿಧೇಯಕಗಳ ಮೂಲಕ ಯುಪಿಎ ಸರಕಾರ ಜನರನ್ನು ಸಶಕ್ತರನ್ನಾಗಿಸಲು ಪ್ರಯತ್ನಿಸಿತು. ಆದರೆ ಎನ್‌ಡಿಎ ಸರಕಾರದ ಉದ್ದೇಶ ಬಂಡವಾಳಶಾಹಿಗಳ ಹಿತಾಶಕ್ತಿಯಾಗಿ ಬದಲಾಗಿದೆ ಎಂದರು.
 
ಮೋದಿಯವರು 'ಏಕಾಂಗಿ'ಯಾಗಿ ಕೈಗಾರಿಕೆ, ರಸ್ತೆ,  ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವುದು ಸಾಧ್ಯವಾದ ಮಾತೇ ಎಂದು ಜನರಲ್ಲಿ ಪ್ರಶ್ನಿಸಿದ ರಾಹುಲ್, ಅಧಿಕಾರವನ್ನು ವಶಪಡಿಸಿಕೊಂಡು ಜನಸಾಮಾನ್ಯರನ್ನು ಒಳಗೊಳ್ಳದೇ ನಿರಂಕುಶ ಆಡಳಿತ ನಡೆಸುವುದು ಅವರ ಬಯಕೆಯಾಗಿತ್ತು ಎಂದು ಆರೋಪಿಸಿದ್ದಾರೆ.
 
''ಸಮಾಜದ ಎಲ್ಲ ಸ್ತರದ ಜನರನ್ನು ತನ್ನೊಂದಿಗೆ ಕೊಂಡೊಯ್ಯುವುದು ಕಾಂಗ್ರೆಸ್‌ನ ತತ್ವವಾದರೆ, ಅಧಿಕಾರ ಪಡೆದು ತಮಗಿಷ್ಟ ಬಂದಂತೆ ಸರಕಾರ ನಡೆಸಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಇದೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇರುವ ಪ್ರಮುಖ ವ್ಯತ್ಯಾಸ,'' ಎಂದು ರಾಹುಲ್ ಹೇಳಿದ್ದಾರೆ.
 
ಕಾಂಗ್ರೆಸ್ ಯಾವಾಗಲೂ ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ಆಸಕ್ತಿ ವಹಿಸಿ ಕೆಲಸ ಮಾಡಿತ್ತು ಎಂದು ಎಐಸಿಸಿ ಉಪಾಧ್ಯಕ್ಷ ವಾದಿಸಿದ್ದಾರೆ.

Share this Story:

Follow Webdunia kannada