ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಕಾಶ್ಮಿರದಲ್ಲಿರುವ ಪ್ರತ್ಯೇಕತಾವಾದಿ ನಾಯಕರುಗಳಿಗೆ ಎಲ್ಲಾ ಸರಕಾರಿ ಸೌಲಭ್ಯಗಳನ್ನು ರದ್ದುಗೊಳಿಸುವ ಕುರಿತಂತೆ ಮೋದಿ ಸರಕಾರ ಚಿಂತನೆ ನಡೆಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಪ್ರತ್ಯೇಕತಾವಾದಿ ನಾಯಕರುಗಳಾದ ಸಯೀದ್ ಅಲಿ ಶಾ ಗಿಲಾನಿ, ಮಿರ್‌ವೈಜ್ ಫಾರೂಕ್ ಮತ್ತು ಯಾಸಿನ್ ಮಲಿಕ್ ಅವರಿಗೆ ವಿಮಾನದ ಟಿಕೆಟ್, ಹೋಟೆಲ್, ಟ್ಯಾಕ್ಸಿ ಸೇವೆಗಳನ್ನು ರದ್ದುಗೊಳಿಸಲು ಸಿದ್ದತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ನೇತೃತ್ವದ ಸರಕಾರ ಜಮ್ಮು ಕಾಶ್ಮಿರದಲ್ಲಿರುವ ಮೆಹಬೂಬಾ ಮುಫ್ತಿ ನೇತೃತ್ವದ ಸರಕಾರ ಕೂಡಾ ಪ್ರತ್ಯೇಕತಾವಾದಿಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ರದ್ದುಗೊಳಿಸುವಂತೆ ಕೋರಿದೆ.
ಗಮನಾರ್ಹ ವಿಷಯವೆಂದರೆ, ಪ್ರತಿ ವರ್ಷ ಪ್ರತ್ಯೇಕತಾವಾದಿ ನಾಯಕರುಗಳಿಗಾಗಿ ಸರಕಾರ 100 ಕೋಟಿ ವೆಚ್ಚ ಮಾಡುತ್ತಿದೆ. ಅದರಲ್ಲಿ ಕೇಂದ್ರ ಸರಕಾರ ಶೇ.90 ರಷ್ಟು ಪಾಲು ಹೊಂದಿದ್ದರೆ ರಾಜ್ಯ ಸರಕಾರ ಕೇವಲ ಶೇ.10 ರಷ್ಟು ಪಾಲು ಹೊಂದಿದೆ.
ಪ್ರಸ್ತುತ ಪ್ರತ್ಯೇಕತಾವಾದಿ ನಾಯಕರುಗಳಿಗೆ 950 ಪೊಲೀಸರು ರಕ್ಷಣೆಯನ್ನು ನೀಡುತ್ತಿದ್ದು, ಅವರ ಭದ್ರತೆಯನ್ನು ಹಿಂಪಡೆಯುವ ಬಗ್ಗೆ ರಾಜ್ಯ ಸರಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಜ್ಬುಲ್ ಮುಜಾಹಿದಿನ್ ಉಗ್ರ ಬುರ್ಹಾನ್ ವನಿ ಎನ್‌ಕೌಂಟರ್ ಹತ್ಯೆಯ ನಂತರ ಉಂಟಾದ ಗಲಭೆಗಳಿಂದ ಕಾಶ್ಮಿರದಾದ್ಯಂತ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 55 ದಿನಗಳ ಅವಧಿಯಲ್ಲಿ 72 ಜನರು ಸಾವನ್ನಪ್ಪಿದ್ದು 11 ಸಾವಿರ ಜನ ಗಾಯಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ