ಈ ಬಾರಿ ದೀಪಾವಳಿಯನ್ನು ಗಡಿಯಲ್ಲಿ ನಮ್ಮ ದೇಶವನ್ನು ಕಾಯುವ ಸೇನಾ ಯೋಧರಿಗೆ ಸಮರ್ಪಿಸೋಣ ಎಂದು ಪ್ರಧಾನಿ ಮೋದಿ ದೇಶಕ್ಕೆ ಕರೆ ನೀಡಿದ್ದಾರೆ.
ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನ 25ನೇ ಸರಣಿಯಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜನತೆಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.
ಯೋಧರು ದೇಶಕ್ಕಾಗಿ ಮಾಡುವ ತ್ಯಾಗ, ಬಲಿದಾನಗಳನ್ನು ಮನಸಾರೆ ಕೊಂಡಾಡಿದ ಅವರು, ಯೋಧರು ಸದಾ ನಮ್ಮನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿರುತ್ತಾರೆ. ಅವರಿಂದಾಗಿ ನಾವು ದೀಪಾವಳಿಯನ್ನು ನಿರಾತಂಕವಾಗಿ ಆಚರಿಸಲು ಸಾಧ್ಯವಾಗುತ್ತಿದೆ. ಇದಕ್ಕಾಗಿ ನಮ್ಮ ಯೋಧರಿಗೆ ಧನ್ಯವಾದಗಳನ್ನು ಹೇಳಲೇ ಬೇಕು ಎಂದಿದ್ದಾರೆ.
ಪಟಾಕಿಯಿಂದ ಸಂಭವಿಸುವ ಅನಾಹುತಗಳಿಗೆ ಕಳವಳ ವ್ಯಕ್ತ ಪಡಿಸಿದ ಅವರು, ಪಟಾಕಿಯಿಂದ ಸಂಭವಿಸುವ ಅವಘಡ ಮಕ್ಕಳ ಭವಿಷ್ಯಕ್ಕೆ ಅಂಧಕಾರ ತರಬಹುದು, ಪೋಷಕರು ಎಚ್ಚರದಿಂದಿರಬೇಕು ಎಂದರು.
ಮುಂದುವರೆದು ಕೇರಳ ಬಯಲು ಶೌಚಾಲಯ ಮುಕ್ತ ರಾಜ್ಯವಾಗುವ ನಿಟ್ಟಿನಲ್ಲಿ ಸಾಗುತ್ತಿದೆ ಎಂದ ಅವರು ತಮ್ಮ ರಾಜ್ಯವನ್ನು ಬಯಲು ಶೌಚ ಮುಕ್ತ ಗೊಳಿಸುವ ಧ್ಯೇಯದೊಂದಿಗೆ ಮುನ್ನುಗ್ಗುತ್ತಿರುವ ಕೇರಳದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು.
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಸ್ಮರಿಸಿಕೊಂಡ ಅವರು, ಸರ್ದಾರ್ ಪುಣ್ಯ ತಿಥಿ ದಿನವನ್ನು ರಾಷ್ಟ್ರೀಯ ಏಕತಾ ದಿವಸವೆಂದು ಆಚರಿಸಲಾಗುವುದು. ದೇಶದ ಏಕತೆಗಾಗಿ ಎಲ್ಲರೂ ಪಣ ತೊಡಬೇಕು ಎಂದು ಕರೆ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ