Select Your Language

Notifications

webdunia
webdunia
webdunia
webdunia

ಅಕ್ರಮ ಗೋವಧೆ ಹಣ ಆತಂಕವಾದಿ ಕೃತ್ಯಗಳಿಗೆ ಬಳಕೆ: ಮೇನಕಾ ಗಾಂಧಿ

ಅಕ್ರಮ ಗೋವಧೆ ಹಣ ಆತಂಕವಾದಿ ಕೃತ್ಯಗಳಿಗೆ ಬಳಕೆ: ಮೇನಕಾ ಗಾಂಧಿ
ಜೈಪುರ್ , ಸೋಮವಾರ, 15 ಸೆಪ್ಟಂಬರ್ 2014 (13:12 IST)
ಭಾರತ ಗೋಮಾಂಸ ರಫ್ತಿನಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನ ಪಡೆದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಮೇನಕಾ ಗಾಂಧಿ  ಅಕ್ರಮ ಪ್ರಾಣಿ ವಧೆಯಿಂದ ಸಂಗ್ರಹವಾದ ಹಣವನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಜೈಪುರದಲ್ಲಿ ನಡೆದ ಇಂಡಿಯಾ ಫಾರ್ ಎನಿಮಲ್ಸ್( ಪ್ರಾಣಿಗಳಿಗಾಗಿ ಭಾರತ)  ಸಮ್ಮೇಳನದಲ್ಲಿ ಸಮರೋಪ ಉಪನ್ಯಾಸವನ್ನು ನೀಡುತ್ತಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ "ನಾವು ವಿಶ್ವದ ಅತಿ ದೊಡ್ಡ ದನದ ಮಾಂಸದ ರಫ್ತುದಾರರಾಗಿದ್ದೇವೆ. ಮತ್ತು ಚರ್ಮಕ್ಕಾಗಿಯೂ ಗೋವುಗಳನ್ನು ಕೊಲ್ಲುತ್ತಿದ್ದೇವೆ. ವಾಸ್ತವವಾಗಿ ಭಾರತದಲ್ಲಿ ಚೀನಾಕ್ಕಿಂತ ಹೆಚ್ಚು ಪ್ರಾಣಿಗಳು ಕೊಲ್ಲಲಾಗುತ್ತಿದೆ, ಇದು ಚಿಂತಾಜಕನಕ ಮತ್ತು ಭಯಾನಕ " ಎಂದು ಖೇದ ವ್ಯಕ್ತಪಡಿಸಿದ್ದಾರೆ. 
 
''ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಗೋಮಾಂಸದ ಬೇಡಿಕೆಯನ್ನು ಪೂರೈಸಲು ಹಾಲು ನೀಡುವ ಹಸುಗಳನ್ನು ಅವ್ಯಾಹತವಾಗಿ ಹತ್ಯೆ  ನಡೆಸಲಾಗುತ್ತಿದೆ. ಇದರಿಂದ ದೇಶದಲ್ಲಿ ಆರೋಗ್ಯಯುತ ಹಾಲಿನ ಕೊರತೆಯುಂಟಾಗಿದ್ದು, ಕಲಬೆರಕೆ ಹಾಲಿನ ದಂಧೆ ಹೆಚ್ಚುತ್ತಿದೆ. ಮಾರಾಟಗಾರರು ಕಟುಕರ ಮುಂದೆಯೇ ಹಾಲು ಕರೆದು ತಾವು ಹಾಲು ಕೊಡುವ ಹಸುವನ್ನೇ ತಂದಿದ್ದೇವೆ ಎಂದು ಸಾಬೀತುಪಡಿಸಲು ಯತ್ನಿಸುತ್ತಾರೆ'' ಎಂದು ಅವರು ತಿಳಿಸಿದರು. 
 
ಕಳೆದ ನಾಲ್ಕು ವರುಷಗಳ ಹಿಂದೆ ಉತ್ತರ ಪ್ರದೇಶ ಪೋಲಿಸರಿಗೆ ಸಲ್ಲಿಕೆಯಾಗಿದ್ದ ವರದಿಯನ್ನು ಉಲ್ಲೇಖಿಸಿದ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮತ್ತು ಪರಿಸರವಾದಿಯೂ ಆಗಿರುವ ಅವರು "ಅಕ್ರಮ ಪ್ರಾಣಿ ವಧೆಯಿಂದ ಸಂಗ್ರಹವಾದ ಹಣವನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಆ ಹಣದಿಂದಲೇ ಬಾಂಬ್ ತಯಾರಿಸಲಾಗುತ್ತದೆ. ನಮ್ಮ ಸಾವಿಗೆ ಕಾರಣವಾಗುವ ಇದಕ್ಕೆ ನಾವ್ಯಾಕೆ ಅವಕಾಶ ಮಾಡಿಕೊಡಬೇಕು" ಎಂದು ಪ್ರಶ್ನಿಸಿದರು.
 
ಎಲ್ಲ ಸಮುದಾಯದವರೂ ಗೋಹತ್ಯೆಯಲ್ಲಿ ತೊಡಗಿರುವುದರಿಂದ ಇದು ನಿರ್ದಿಷ್ಟ ಕೋಮು ಅಥವಾ ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲ. ಕಟುಕನೊಬ್ಬ ಮುಸ್ಲಿಮನಾಗಿರಬಹುದು. ಆದರೆ ಹಸುವಿನ ಸಾಗಣೆದಾರ ಮತ್ತು ಮಾಲೀಕ ಹೆಚ್ಚಿನ ಸಂದರ್ಭಗಳಲ್ಲಿ ಹಿಂದು ಅಥವಾ ಮುಸ್ಲಿಮೇತರರೇ ಆಗಿರುತ್ತಾರೆ. ಆದ್ದರಿಂದ ಇದು ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲ. ಕೇವಲ ಧನ ಸಂಗ್ರಹದ ಪೈಶಾಚಿಕತನಕ್ಕೆ ಸಂಬಂಧಿಸಿದ್ದು'' .
 
"ನೂರಾರು ಗಬ್ಬದ ಹಸುಗಳನ್ನು ನಿರ್ದಯವಾಗಿ ಕೊಲ್ಲಲಾಗುತ್ತಿದೆ. ಭಾರತದಿಂದ ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಗೋಮಾಂಸ ರಫ್ತಾಗುತ್ತದೆ ಮತ್ತು ತಮ್ಮ ದೇಶ  160,000 ಟನ್ ಗೋಮಾಂಸ ರಫ್ತು ಮಾಡುತ್ತದೆ ಎಂದು ಬಾಂಗ್ಲಾ ಹೇಳುತ್ತದೆ. ಆದರೆ ವಾಸ್ತವವೇನೆಂದರೆ ಆ ದೇಶದಲ್ಲಿ ಒಂದು ಹಸು ಕೂಡ ಇಲ್ಲ". 
 
''ಎಲ್ಲ ಬಗೆಯ ಪ್ರಾಣಿಗಳ ಮಾಂಸದ ರಫ್ತನ್ನು ನಿಷೇಧಿಸಬೇಕು. ಜಾನುವಾರು ಸಂರಕ್ಷಣಾ ಕಾರ್ಯಕರ್ತರು ಈ ನಿಟ್ಟಿನಲ್ಲಿ ದೇಶವ್ಯಾಪಿ ಆಂದೋಲನ ಪ್ರಾರಂಭಿಸಬೇಕು'' ಎಂದು ಅವರು ಕರೆ ನೀಡಿದರು.
 
"ರಾಜಸ್ಥಾನದ ಅನೇಕ ಕಡೆಗಳಲ್ಲಿ ಜಿಂಕೆ ಮಾಂಸ ಸಿಗುತ್ತದೆ. ಗುಡಿಸಲುಗಳಲ್ಲೂ ಕೂಡ ಇದು ದೊರೆಯುತ್ತದೆ ಎಂದು ದೆಹಲಿಯಲ್ಲಿ ಕುಳಿತೇ ನಾನು  ಮಾಹಿತಿ ಸಂಗ್ರಹಿಸಿದ್ದೇನೆ. ಪ್ರಾಣಿಗಳ ಅವಯವಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ 25,000 ವೈಬ್ಸೈಟ್‌ಗಳು ಕಾರ್ಯನಿರ್ವಹಿಸುತ್ತಿವೆ" ಎಂದು ಅವರು ಹೇಳಿದರು.
 
ಶಾಲಾ ಕಾಲೇಜುಗಳಲ್ಲಿ ಪ್ರಯೋಗಾತ್ಮಕ ಉದ್ದೇಶದಿಂದ ಪ್ರಾಣಿಗಳನ್ನು ಕತ್ತರಿಸುವುದನ್ನು ನಿಲ್ಲಿಸಬೇಕೆಂದ ಅವರು ಭಾರತೀಯ ವೈದ್ಯ ಮಂಡಳಿ ಕೂಡ ಇದನ್ನು ನಿಷೇಧಿಸಲು ಬೆಂಬಲ ನೀಡಿದೆ ಎಂದರು.
 
ಭಾರತೀಯ ಪ್ರಾಣಿ ಸಂರಕ್ಷಣಾ ಸಂಘಗಳ ಒಕ್ಕೂಟ (FIAPO) ಮತ್ತು ಅದರ ಸಹವರ್ತಿಗಳು ಆಯೋಜಿಸಿದ್ದ ಎರಡು ದಿನಗಳ ಸಮ್ಮೇಳನದಲ್ಲಿ 200 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

Share this Story:

Follow Webdunia kannada