Select Your Language

Notifications

webdunia
webdunia
webdunia
webdunia

ರೇಲ್ವೆ ಬೋಗಿಯೊಳಗೆ ಬೆಂಕಿ ಹಚ್ಚಿ ಕೊಲೆ

ರೇಲ್ವೆ ಬೋಗಿಯೊಳಗೆ ಬೆಂಕಿ ಹಚ್ಚಿ ಕೊಲೆ
ಕಣ್ಣೂರು , ಮಂಗಳವಾರ, 21 ಅಕ್ಟೋಬರ್ 2014 (10:37 IST)
ನಿಂತಿದ್ದ ರೇಲ್ವೆಯ ಬೋಗಿಯೊಳಗೆ 40 ವರ್ಷದ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಕೊಲೆಗೈದ ಘಟನೆ ಕೇರಳದಲ್ಲಿ ನಡೆದಿದೆ.

ಪೀಡಿತ ಮಹಿಳೆಯನ್ನು ಮಲಪ್ಪುರಮ್ ಜಿಲ್ಲೆಯ ನಿವಾಸಿಯಾದ ಪಥುಟ್ಟಿ ಅಲಿಯಾಸ್ ಖಜೀಜಾ ಎಂದು ಗುರುತಿಸಲಾಗಿದ್ದು, 45% ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಪೊಲೀಸರ ಪ್ರಕಾರ ದೇಹಕ್ಕೆ ಬೆಂಕಿ ಹೊತ್ತಿಕೊಂಡಿದ್ದ ಮಹಿಳೆಯೊಬ್ಬರು ಮುಂಜಾನೆ ಸುಮಾರು 4.30ರ ಸುಮಾರಿಗೆ ಕಣ್ಣೂರು-ಆಲಪುಜಾ ಎಕ್ಸಿಕ್ಯುಟಿವ್ ಎಕ್ಸ್ಪ್ರೆಸ್ ರೈಲಿನ ಬೋಗಿ ಸಂಖ್ಯೆ 13 ರಿಂದ ಕೆಳಗೆ ಹಾರುತ್ತಿದ್ದುದನ್ನು ನಿಲ್ದಾಣದಲ್ಲಿದ್ದ ಜನರು ನೋಡಿದರು. ಕೆಲ ಸಮಯದ ಮೊದಲು ಆಕೆ ಪ್ಲಾಟ್‌ಫಾರ್ಮ್‌ನಲ್ಲಿ ವ್ಯಕ್ತಿಯೊಬ್ಬನ ಜತೆ ವಾಗ್ವಾದ ಮಾಡುತ್ತಿದ್ದುದನ್ನು ಸಹ ಕೆಲ ಜನರು ಗಮನಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ವ್ಯಕ್ತಿ ನಿಲ್ದಾಣದಿಂದ ಪಲಾಯನ ಮಾಡಿದ್ದು, ಆತನ ಗುರುತು ಪತ್ತೆಯಾಗಿಲ್ಲ.
 
ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಒಂದು ಚೀಲ, ಚಾಕು ಮತ್ತು ಮದ್ಯದ ಖಾಲಿ ಬಾಟಲ್ ಪತ್ತೆಯಾಗಿದೆ. ಆಕೆಯ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ಶಂಕಿಸಲಾಗಿದೆ.
 
ಪ್ರಕರಣದ ಗಂಭೀರ ತನಿಖೆ ನಡೆಸಲು ಎಸ್ಪಿ (ರೈಲ್ವೇಸ್) ಯವರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. 

Share this Story:

Follow Webdunia kannada