ಲಖನೌ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಬಗ್ಗೆ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮದಿಂದ ರಾಜ್ಯದ ಆರ್ಥಿಕತೆಗೆ ₹3 ಲಕ್ಷ ಕೋಟಿ ಆದಾಯ ಹರಿದುಬರಲಿದೆ ಎಂದು ತಿಳಿಸಿದರು.
ಮಹಾಕುಂಭ ಕೋಟ್ಯಂತರ ಜನರ ನಂಬಿಕೆಯ ಪ್ರತೀಕವಾಗಿದ್ದು, ಹಲವಾರು ವರ್ಷಗಳಿಂದಲೂ ಹತ್ತಿಕ್ಕಲಾಗಿತ್ತು ಎಂದು ತಿಳಿಸಿದರು.
ಮಹಾಕುಂಭ ಮೇಳಕ್ಕೆ ₹5 ಸಾವಿರದಿಂದ ₹6 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ ಎಂದು ಕೆಲವರು ಟೀಕೆ ಮಾಡಿದ್ದಾರೆ. ಕುಂಭಮೇಳದಿಂದ ₹3 ಕೋಟಿ ಆದಾಯವಾಗಿದ್ದು, ಇದರಿಂದ ರಾಜ್ಯದ ಆರ್ಥಿಕತೆಗೆ ಭಾರೀ ಕೊಡುಗೆಯಾಗಿದೆ.
ಕುಂಭ ನಡೆಸಲು ಕೇವಲ ₹1500 ಕೋಟಿ ಖರ್ಚು ಮಾಡಲಾಗಿದೆ. ಉಳಿದ ಹಣವನ್ನು ಪ್ರಯಾಗರಾಜ್‌ನ ಪಟ್ಟಣದ ಮೂಲ ಸೌಕರ್ಯದ ಅಭಿವೃದ್ಧಿಗೆ ಬಳಸಲಾಗಿದೆ. ಇದರಿಂದ ದೇಶದ ಆರ್ಥಿಕತೆಗೂ ವರದಾನವಾಗಲಿ ಎಂದರು. ತ್ರಿವೇಣಿ ಸಂಗಮದಲ್ಲಿ ಇದುವರೆಗೆ ಸುಮಾರು 50 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಯೋಗಿ ಹೇಳಿದರು.<>