ಮಧ್ಯಪ್ರದೇಶ: ಅಂತ್ಯಕ್ರಿಯೆ ನಡೆಸಲು ಸಹೋದರರ ನಡುವೆ ಕಿತ್ತಾಟವಾಗಿ ಕೊನೆಯ ತಂದೆಯ ಮೃತದೇಹವನ್ನೇ ಎರಡು ಭಾಗ ಮಾಡಲು ಹೊರಟ ಶಾಕಿಂಗ್ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಹೋದರರ ನಡುವೆ ವೈಮನಸ್ಯಗಳು ಸಾಮಾನ್ಯ. ಸಹೋದರರ ನಡುವೆ ಕಿತ್ತಾಟವಾಗಿ ಆಸ್ತಿ ಭಾಗವಾಗುವುದು ಸಹಜ. ಆದರೆ ಇಲ್ಲಿ ತಂದೆಯ ಮೃತದೇಹವನ್ನೇ ಎರಡು ಭಾಗ ಮಾಡಿರುವುದು ನಿಜಕ್ಕೂ ಶಾಕಿಂಗ್.
ಮಧ್ಯಪ್ರದೇಶದ ತಾಲ್ ಲಿಧೋರಾ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. 85 ವರ್ಷದ ಧ್ಯಾನಿ ಸಿಂಗ್ ವಯೋಸಹಜ ಖಾಯಿಲೆಯಿಂದಾಗಿ ಮೃತಪಟ್ಟಿದ್ದರು. ಅವರ ಅಂತ್ಯ ಕ್ರಿಯೆ ನಡೆಸುವ ವಿಚಾರದಲ್ಲಿ ಸಹೋದರರಾದ ದಾಮೋದರ್ ಸಿಂಗ್ ಮತ್ತು ಕಿಶನ್ ಸಿಂಗ್ ನಡುವೆ ಜಗಳವಾಗಿದೆ.
ಇಷ್ಟು ದಿನವೂ ದಾಮೋದರ್ ಸಿಂಗ್ ತಮ್ಮ ತಂದೆಯನ್ನು ನೋಡಿಕೊಂಡಿದ್ದ. ಈಗ ತಂದೆಯ ಸಾವಿನ ಬಳಿಕ ಕಿಶನ್ ಇಲ್ಲದೇ ಅಂತ್ಯಕ್ರಿಯೆ ನಡೆಸಬೇಕೆಂಬುದು ದಾಮೋದರ್ ಹಠವಾಗಿತ್ತು. ಆದರೆ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ತಾನೂ ಇರಬೇಕು ಎಂಬುದು ಕಿಶನ್ ವಾದವಾಗಿತ್ತು.
ಇಬ್ಬರ ನಡುವೆ ಕಿತ್ತಾಟವಾಗಿ ಕೆಲವು ಹೊತ್ತು ಮೃತದೇಹ ಅನಾಥವಾಗಿತ್ತು. ಬಳಿಕ ಸಹೋದರರಿಬ್ಬರೂ ಮೃತದೇಹವನ್ನು ಎರಡು ಭಾಗ ಮಾಡಿ ಪ್ರತ್ಯೇಕವಾಗಿ ಅಂತ್ಯಕ್ರಿಯೆ ನಡೆಸಲು ತಯಾರಿ ನಡೆಸಿದ್ದರು. ಆದರೆ ಈ ವೇಳೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.