ನವದೆಹಲಿ: ಬಿಜೆಪಿ ಹಿರಿಯ ನಾಯಕ, ಭಾರತ ರತ್ನ ಎಲ್ ಕೆ ಅಡ್ವಾಣಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯಕ್ಕೆ ಅವರನ್ನು ನಿಗಾದಲ್ಲಿರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಅಟಲ್ ಬಿಹಾರಿ ವಾಜಪೇಯಿ ಬಲಗೈ ಬಂಟನಂತಿದ್ದ ಎಲ್ ಕೆ ಅಡ್ವಾಣಿ ಬಿಜೆಪಿಯ ಭೀಷ್ಮ ಎಂದೇ ಪರಿಚಿತರು. ಇತ್ತೀಚೆಗಷ್ಟೇ ಅವರ ರಾಜಕೀಯ ಜೀವನದ ಸಾಧನೆ ಗುರುತಿಸಿ ಮೋದಿ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿತ್ತು. ಇದೀಗ ಅವರ ಅನಾರೋಗ್ಯದ ಸಂಗತಿ ಆತಂಕಕ್ಕೆ ಕಾರಣವಾಗಿದೆ.
96 ವರ್ಷದ ಎಲ್ ಕೆ ಅಡ್ವಾಣಿಯವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ಆರೋಗ್ಯ ಸಮಸ್ಯೆ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ ವಯೋಸಹಜವಾದ ಖಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಯೂರೋಲಜಿ ವಿಭಾಗದ ತಜ್ಞ ವೈದ್ಯರು ಎಲ್ ಕೆ ಅಡ್ವಾಣಿಯವರನ್ನು ವಿಶೇಷವಾಗಿ ನೋಡಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಬೇಗನೇ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.