ಎಎಪಿ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ನಿರತರಾಗಿದ್ದ ಅನೇಕ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಲೆ. ಗವರ್ನರ್ ನಜೀಬ್ ಜಂಗ್ ಆದೇಶ ನೀಡಿದ ಬಳಿಕ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡಿ ದೆಹಲಿಯನ್ನು ನಾಶ ಮಾಡಲು ಮೋದಿ ಶತಾಯಗತಾಯ ಯತ್ನಿಸಿದ್ದಾರೆಂದು ಟೀಕಿಸಿದರು.
ರಾಷ್ಟ್ರ ರಾಜಧಾನಿಯ ಆಡಳಿತಾತ್ಮಕ ಮುಖ್ಯಸ್ಥ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದ ಬಳಿಕ ಲೆ. ಗವರ್ನರ್ ಲೋಕೋಪಯೋಗಿ ಇಲಾಖೆ, ಪರಿಸರ ಮತ್ತು ಆರೋಗ್ಯ ಇಲಾಖೆಗಳಲ್ಲಿ ಪುನರ್ರಚನೆ ಮಾಡಿದ್ದಾರೆ.
''ಇಂದು ಅನೇಕ ಅಧಿಕಾರಿಗಳನ್ನು ಎಲ್‌ಜಿ ವರ್ಗಾವಣೆ ಮಾಡಿದರು. ಕಡತಗಳನ್ನು ಸಿಎಂ ಅಥವಾ ಸಚಿವರಿಗೆ ಕೂಡ ತೋರಿಸಿಲ್ಲ. ಇದು ಪ್ರಜಾಪ್ರಭುತ್ವದ ಮೋದಿ ಮಾದರಿಯೇ'' ಎಂದು ಕೇಜ್ರಿವಾಲ್ ಪ್ರಶ್ನಿಸಿದರು. ಆರೋಗ್ಯ ಮತ್ತು ಶಿಕ್ಷಣದ ಗುಣಮಟ್ಟ ಕ್ಷೀಣಿಸಿದರೆ ಮೋದಿ ಜವಾಬ್ದಾರಿ. ಏಕೆಂದರೆ ಮೋದಿ ಎಎಪಿ ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ.
ಮೋದಿಜಿ ಎಲ್‌ಜಿಗೆ ಕರೆ ಮಾಡಿ ಇವೆರಡು ಕಚೇರಿಯ ಅಧಿಕಾರಿಗಳ ವರ್ಗಕ್ಕೆ ಸೂಚಿಸಿದ್ದಾರೆ. ಮೋದಿ ಯಾವುದೇ ಮಟ್ಟಕ್ಕಾದರೂ ಹೋಗಬಹುದು. ಶಿಕ್ಷಣ ಮತ್ತು ಆರೋಗ್ಯದ ಗುಣಮಟ್ಟ ಕ್ಷೀಣಿಸಿದರೆ ಮೋದಿ ಜವಾಬ್ದಾರಿ ಎಂದು ಕೇಜ್ರಿವಾಲ್ ವಾಗ್ದಾಳಿ ಮಾಡಿದರು.