Select Your Language

Notifications

webdunia
webdunia
webdunia
webdunia

ಹೊತ್ತಿ ಉರಿಯುತ್ತಿರುವ ಕಾಶ್ಮೀರ: ತುರ್ತು ಸಭೆ ಕರೆದ ಮೋದಿ

ಹೊತ್ತಿ ಉರಿಯುತ್ತಿರುವ ಕಾಶ್ಮೀರ: ತುರ್ತು ಸಭೆ ಕರೆದ ಮೋದಿ
ನವದೆಹಲಿ , ಮಂಗಳವಾರ, 12 ಜುಲೈ 2016 (12:51 IST)
ಕಳೆದ ನಾಲ್ಕು ದಿನಗಳಿಂದ ಕಣಿವೆರಾಜ್ಯ ಜಮ್ಮು ಮತ್ತು ಕಾಶ್ಮೀರ ಹೊತ್ತಿ ಉರಿಯುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ಕರೆದಿದ್ದಾರೆ. 
 
ಗೃಹ ಸಚಿವರಾದ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವ ಮನೋಹರ ಪರಿಕ್ಕರ್, ಎನ್ಎಸ್ಎ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಎಸ್.ಜೈ ಶಂಕರ್ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. 
 
ಜುಲೈ 17 ರಿಂದ ಅಮೇರಿಕಾ ಪ್ರವಾಸಕ್ಕೆ ಹೊರಡಬೇಕಿದ್ದ ರಾಜನಾಥ್ ಸಿಂಗ್ ತಮ್ಮ ಪ್ರವಾಸವನ್ನು ಮುಂದೂಡಿದ್ದಾರೆ. 
 
ಜುಲೈ 18 ರಿಂದ ಮಾನ್ಸೂನ್ ಅಧಿವೇಶನ ಆರಂಭವಾಗಲಿದ್ದು, ಸಿಂಗ್ ಸದನದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ವಿವರಿಸಲಿದ್ದಾರೆ. 
 
ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡ್ ಬುರ್ಹಾನ್ ವಾನಿ ಹತ್ಯೆಯ ಬಳಿಕ ಕಣಿವೆ ನಾಡು ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು ಸಾವಿನ ಸಂಖ್ಯೆ 32ಕ್ಕೇರಿದೆ. ಅನೇಕ ಪ್ರದೇಶಗಳಲ್ಲಿ ಹೇರಿರುವ ಕರ್ಫ್ಯೂವನ್ನು ಮುಂದುವರೆಸಲಾಗಿದೆ.
 
ಪ್ರತಿಭಟನೆಯಲ್ಲಿ ಗಾಯಗೊಂಡಿದ್ದ 9 ಜನರು ನಿನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅದರಲ್ಲಿ ಒಬ್ಬ ಹುಡುಗಿಯೂ ಇದ್ದಾಳೆ. ಘಟನೆಯಲ್ಲಿ 100ಕ್ಕೂ ಹೆಚ್ಚು ಪೊಲೀಸರು ಸೇರಿದಂತೆ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 
 
ಪ್ರತ್ಯೇಕತಾವಾದಿಗಳು ಬಂದ್ ಕರೆಯನ್ನು ಮತ್ತೆರಡು ದಿನಗಳಿಗೆ ವಿಸ್ತರಿಸಿದ್ದಾರೆ. 
 
ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆಯಿಂದ ಮೊಬೈಲ್ ಸಂಪರ್ಕವನ್ನು ತಡೆ ಹಿಡಿಯಲಾಗಿದೆ. 
 
ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ, ಪೊಲೀಸ್‌ ವಾಹನಗಳಿಗೆ ಬೆಂಕಿ ಹಾಕಿದಂತಹ ಘಟನೆಗಳು  ಸೋಮವಾರವೂ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಜಿಲ್ಲೆಯ ಡಿಸಿಗೆ ರಕ್ಷಣೆ ನೀಡಲಾಗದವರು ನೀವು: ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ