ಕಾವೇರಿ ನೀರಿಗಾಗಿ ಎರಡು ರಾಜ್ಯಗಳು ಹೊತ್ತಿ ಉರಿಯುತ್ತಿರುವ ನಡುವೆ ಕೇಳಿ ಬಂದ ಹೃದಯ ಕಲಕುವ ಕಥೆ ಇದು. ಬೆಂಗಳೂರಿನ ವೈದ್ಯರ ತಂಡವೊಂದು ಲಿವರ್ ಕಸಿಗೊಳಗಾಗ ಬೇಕಿದ್ದ ರೋಗಿಯೊಬ್ಬರ ಜತೆ ರಾತ್ರಿ 1 ಗಂಟೆ ಸುಮಾರಿಗೆ ತಮಿಳುನಾಡಿಗೆ ಪ್ರಯಾಣ ಬೆಳೆಸಿ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮಾಡಿ ಹಿಂತಿರುಗಿದ್ದಾರೆ. ದಾನಿ ಕುಟುಂಬ ತಮಿಳುನಾಡಿನ ಈರೋಡ್‌ನದಾಗಿತ್ತು.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಕೂಡ ತಮ್ಮ ವೈದ್ಯ ಧರ್ಮವನ್ನು ಮಾಡಲು ಪಣತೊಟ್ಟ ಡಾಕ್ಟರ್ ಎ. ಒಲಿತ್‌ಸೆಲ್ವನ್ ನೇತೃತ್ವದ ತಂಡ ಕಳೆದೆರಡು ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವ ಮಹಾರಾಷ್ಟ್ರದ ನಾಗ್ಪುರದ 55 ವರ್ಷದ ರೋಗಿಯ ಜೀವವನ್ನು ಉಳಿಸಲು ಮುಂದಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಅವರು ಕಸಿಗಾಗಿ ಕಾಯುತ್ತಿದ್ದರು.
ಈ ಕುರಿತು ಪ್ರತಿಕ್ರಿಯಿಸುವ ಒಲಿತ್‌ಸೆಲ್ವನ್, ಎರಡು ರಾಜ್ಯಗಳ ನಡುವಿನ ಈ ವಿಷಮ ಪರಿಸ್ಥಿತಿಯಲ್ಲಿ ತಮಿಳುನಾಡಿನಿಂದ ಬಂದ್ ಲಿವರ್ ಆಫರ್ ತಿರಸ್ಕರಿಸುವುದು ಕಷ್ಟಸಾಧ್ಯವೇನಿರಲಿಲ್ಲ. ನಾವು ಹಾಗೆ ಮಾಡಿದ್ದರೆ ಸಾವಿನಲ್ಲಿ ಹೊಸ ಜೀವವನ್ನು ನೀಡಬೇಕೆನ್ನುವ ದಾನಿಯ ಬಯಕೆ ಅಪೂರ್ಣವಾಗಿ ಉಳಿದು ಬಿಡುತ್ತಿತ್ತು. ನಮಗೂ ಚಿಂತೆಯಾಯ್ತು. ಆದರೆ ರಿಸ್ಕ್‌ನ್ನು ಕಡೆಗಣಿಸಿ ಹೋಗಲು ನಿರ್ಧರಿಸಿದೆವು ಎನ್ನುತ್ತಾರೆ.
ಕಳೆದ ಸೋಮವಾರ ಹಿಂದೆ ಅಪಘಾತವೊಂದರಲ್ಲಿ ತಲೆಗೆ ಗಾಯಗೊಂಡಿದ್ದ ವ್ಯಕ್ತಿ ಬುಧವಾರ ಮೆದುಳು ನಿಷ್ಕ್ರಿಯತೆಗೆ ಒಳಗಾಗಿದ್ದರು. ತಮ್ಮ ಅಂಗಾಂಗ ದಾನ ಮಾಡಬೇಕೆಂದು ಅವರ ಕೊನೆಯಾಸೆಯಾಗಿತ್ತು ಎಂದು ತಿಳಿದು ಬಂದಿದೆ.
ಸತತ 12 ತಾಸುಗಳ ಶಸ್ತ್ರಚಿಕಿತ್ಸೆ ಫಲಪ್ರದವಾಗಿದ್ದು, ರೋಗಿ ಆರೋಗ್ಯವಾಗಿದ್ದಾನೆ. ಆತ ಮತ್ತು ಆತನ ಕುಟುಂಬದ ಸಂತೋಷವನ್ನು ಕಂಡಾಗ ನಮ್ಮ ಪ್ರಯತ್ನ ಯಶ ಕಂಡ ತೃಪ್ತಿ ನಮ್ಮಲ್ಲಿತ್ತು ಎನ್ನುತ್ತಾರೆ ಒಲಿತ್‌ಸೆಲ್ವನ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.