ನವದೆಹಲಿ : ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಇಂದು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ದೆಹಲಿ ವಕ್ಫ್ ಬೋರ್ಡ್ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಅಮಾನತುಲ್ಲಾ ಖಾನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೆಪ್ಟೆಂಬರ್ 16 ರಂದು ಬಂಧಿಸಿತ್ತು.
ವಕ್ಫ್ ಮಂಡಳಿಗೆ ಅಕ್ರಮ ನೇಮಕಾತಿ ಆರೋಪದ ಮೇಲೆ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ ಅಮಾನತುಲ್ಲಾ ಖಾನ್ ಮನೆ, ಕಚೇರಿ ಮೇಲೆ ದಾಳಿ ನಡೆಸಿತ್ತು. ಆ ವೇಳೆ ದೋಷಾರೋಪಣೆಯ ವಸ್ತುಗಳು ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿತ್ತು.
ಜೊತೆಗೆ ಅಮಾನತುಲ್ಲಾ ಖಾನ್ ಆಪ್ತ ಸಹಾಯಕ ಎಂದು ಹೇಳುವ ವ್ಯಕ್ತಿಯಿಂದ ಎರಡು ಶಸ್ತ್ರಾಸ್ತ್ರಗಳು ಮತ್ತು 24 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿತ್ತು.
ಬಂಧನಕ್ಕೊಳಗಾದ ಒಂದು ದಿನದ ನಂತರ, ಅಮಾನತುಲ್ಲಾ ಖಾನ್ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು. ಅಂದೇ ಶಾಸಕರ ಸಹಾಯಕ ಹಮೀದ್ ಅಲಿ ನಿವಾಸದಲ್ಲಿ ಪರವಾನಗಿ ಪಡೆಯದ ಪಿಸ್ತೂಲ್ ಮತ್ತು 12 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಯಿತು.