Select Your Language

Notifications

webdunia
webdunia
webdunia
webdunia

ಉತ್ತರ ಪ್ರದೇಶ: ಮತ್ತೆ ಪತ್ರಕರ್ತನ ಹತ್ಯೆ

ಉತ್ತರ ಪ್ರದೇಶ: ಮತ್ತೆ ಪತ್ರಕರ್ತನ ಹತ್ಯೆ
ಚಂದೌಲಿ , ಸೋಮವಾರ, 5 ಅಕ್ಟೋಬರ್ 2015 (13:12 IST)
ಉತ್ತರ ಪ್ರದೇಶದ ಚಂದೌಲಿಯಲ್ಲಿ ಪತ್ರಕರ್ತರೊಬ್ಬರನ್ನು ಗುಂಡಿಕ್ಕಿ ಸಾಯಿಸಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಮೂರನೆಯ ಘಟನೆ ಇದಾಗಿದೆ.
 
ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ಹೇಮಂತ್ ಯಾದವ್ ಹತ್ಯೆಯಾದ ದುರ್ದೈವಿಯಾಗಿದ್ದಾರೆ. ಧೀನಾ ಪ್ರದೇಶದಲ್ಲಿ  ಶನಿವಾರ ರಾತ್ರಿ ಈ ದುರ್ಘಟನೆ ನಡೆದಿದೆ.  ಬೈಕ್ ಏರಿ ಬಂದಿದ್ದ ಅಪರಿಚಿತರು ಯಾದವ್ ಅವರನ್ನು ಗುಂಡಿಕ್ಕಿ ಹತ್ಯೆ ಗೈದು ಪರಾರಿಯಾಗಿದ್ದಾರೆ, ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ವರ್ಮಾ ಹೇಳಿದ್ದಾರೆ.
 
ಗಂಭೀರವಾಗಿ ಗಾಯಗೊಂಡಿದ್ದ ಯಾದವ್ ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೃತರ ಪತ್ನಿ ಚಂದೌಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. 
 
ಪ್ರಕರಣದ ಕುರಿತು ತನಿಖೆ ನಡೆಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಕೆಲ ಸುಳಿವು ಲಭ್ಯವಾಗಿವೆ ಎಂದು ವರ್ಮಾ ತಿಳಿಸಿದ್ದಾರೆ. 
 
ಉತ್ತರ ಪ್ರದೇಶದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಪತ್ರಕರ್ತರ ಮೇಲೆ ನಡೆದಿರುವ ಮೂರನೇ ದಾಳಿ ಇದಾಗಿದ್ದು, ಜೂನ್  ತಿಂಗಳಲ್ಲಿ ಶಹ್ಜಾನ್‌ಪುರದಲ್ಲಿ ಪತ್ರಕರ್ತ ಜೋಗೇಂದ್ರ ಸಿಂಗ್ ಮನೆಗೆ ಪೊಲೀಸರು ರೈಡ್ ನಡೆಸಿದಾಗ ಅವರು ಬೆಂಕಿ ಹಚ್ಚಿ ಕೊಂಡಿದ್ದರು. ಆದರೆ ಪೊಲೀಸರೇ ಬೆಂಕಿ ಹಚ್ಚಿದರು ಎಂದು ಮೃತರ ಪತ್ನಿ ದೂರು ನೀಡಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು,  ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಸಚಿವರೊಬ್ಬರು ಸೇರಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸಚಿವರ ಮೇಲಿದ್ದ ಅಕ್ರಮ ಗಣಿಗಾರಿಕೆ ಹಾಗೂ ಭೂ ಕಬಳಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಸಿಂಗ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದಿದ್ದ ಪರಿಣಾಮ ಅವರನ್ನು ಕೊಲೆಗೈಯ್ಯಲಾಗಿದೆ ಎಂದು ಹೇಳಲಾಗುತ್ತಿದೆ.
 
ಎರಡನೆಯ ಘಟನೆ ಆಗಸ್ಟ್ ತಿಂಗಳಲ್ಲಿ ಬರೇಲಿ ಜಿಲ್ಲೆಯಲ್ಲಿ ನಡೆದಿತ್ತು. ಸ್ಥಳೀಯ ಹಿಂದಿ ದಿನ ಪತ್ರಿಕೆಯೊಂದರ ಅರೆ ಕಾಲಿಕ ಪತ್ರಕರ್ತ ಸಂಜಯ್ ಪಾಠಕ್ ಎಂಬವರನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆಗೈದಿದ್ದರು. 
 
ಇವಷ್ಟೇ ಅಲ್ಲದೇ ಸಮಾಜವಾದಿ ಪಕ್ಷದ ಆಡಳಿತವಿರುವ ರಾಜ್ಯದಲ್ಲಿ ಹಲವು ಪತ್ರಕರ್ತರ ಮೇಲೆ ಇತ್ತೀಚಿನ ಕೆಲ ತಿಂಗಳುಗಳಲ್ಲಿ ಮಾರಣಾಂತಿಕ ದಾಳಿ ನಡೆದಿವೆ. 

Share this Story:

Follow Webdunia kannada