Select Your Language

Notifications

webdunia
webdunia
webdunia
webdunia

ಮತ್ತೆ ಪತ್ರಕರ್ತನ ಹತ್ಯೆ; ಮರಳು ಮಾಫಿಯಾಕ್ಕೆ ಬಲಿಯಾದ ಜೀವ

ಮತ್ತೆ ಪತ್ರಕರ್ತನ ಹತ್ಯೆ; ಮರಳು ಮಾಫಿಯಾಕ್ಕೆ ಬಲಿಯಾದ ಜೀವ
ಭೋಪಾಲ್ , ಸೋಮವಾರ, 22 ಜೂನ್ 2015 (08:51 IST)
ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಶಾಸಕ ರಾಮಮೂರ್ತಿ ವರ್ಮ ವಿರುದ್ಧ ಲೇಖನ ಬರೆದಿದ್ದುದಕ್ಕೆ  ಪತ್ರಕರ್ತನೊಬ್ಬನನ್ನು ಜೀವಂತ ಸುಟ್ಟು ಹಾಕಿದ ಘಟನೆ ನೆನಪಿನಂಗಳದಲ್ಲಿ ಇನ್ನೂ ಹಸಿ ಹಸಿಯಾಗಿರುವಾಗಲೇ ಮಧ್ಯಪ್ರದೇಶದಲ್ಲೂ ಅಂತಹದ್ದೇ ಘಟನೆ ಮರುಕಳಿಸಿದೆ.ಮಧ್ಯ ಪ್ರದೇಶದ ಬಾಲಘಾಟ್ ಜಿಲ್ಲೆಯ ಕತಂಗಿರಿ ನಿವಾಸಿಯಾದ ಪತ್ರಕರ್ತ ಸಂದೀಪ್ ಕೊಥಾರಿ (44) ಅವರನ್ನು ಸಹ ಜೀವಂತವಾಗಿ ಸುಟ್ಟು ಹಾಕಲಾಗಿದೆ.
 
ಜೂನ್ 19 ರ ರಾತ್ರಿ ಅವರು ನಾಪತ್ತೆಯಾಗಿದ್ದರು. ಜೂನ್ 20 ರಂದು ನಾಪತ್ತೆ ಪ್ರಕರಣ ದಾಖಲಾಗಿತ್ತು. 
 
ತನಿಖೆ ನಡೆಸಿದ ಪೊಲೀಸರಿಗೆ ಶನಿವಾರ ರಾತ್ರಿ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಾಡಿನಲ್ಲಿ ಅವರ ಶವ ಪತ್ತೆಯಾಗಿದೆ. 
 
ಹಿಂದಿ ಪತ್ರಿಕೆಯೊಂದರ ವರದಿಗಾರರಾಗಿರುವ ಕೊಥಾರಿ ಅವರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ಕಾಡಿನಲ್ಲಿ ಹೂಳಲಾಗಿತ್ತು. ಈ ಸಂಬಂಧ ಸ್ಥಳೀಯ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ವಿಶಾಲ್ ದಂಡಿ ಮತ್ತು ಬ್ರಿಜೇಶ್ ದುರ್ಹವಾಲ್ ಬಂಧಿತ ಆರೋಪಿಗಳಾಗಿದ್ದಾರೆ. ರಾಕೇಶ್ ನಸ್ವಾನಿ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
 
ಈ ಮೂವರು ಆರೋಪಿಗಳು ಮರಳು ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಚಿಟ್ ಫಂಡ್ ಕಂಪನಿಗಳನ್ನು ನಡೆಸುತ್ತಿದ್ದಾರೆ. ಅವರ ಹಗರಣಗಳನ್ನು ಕೊಥಾರಿ ಬಯಲಿಗೆಳೆದಿದ್ದರು ಎಂದು ಹೇಳಲಾಗುತ್ತಿದೆ. 
 
ಜೂನ್ 19 ರಂದು ತನ್ನ ಸ್ನೇಹಿತರ ಜತೆ ಹೋಗುತ್ತಿದ್ದ ಕೊಥಾರಿ ಅವರ ಬೈಕ್‌‌ಗೆ ಕಾರ್‌ನಿಂದ ಗುದ್ದಿದ ಆರೋಪಿಗಳು, ಸ್ನೇಹಿತನನ್ನು ಥಳಿಸಿ ಕೊಥಾರಿ ಅವರನ್ನು ಅಪಹರಿಸಿದ್ದರು. 
 
ರೈಲ್ವೆ ಹಳಿ ಬಳಿ ಅವರನ್ನು ಬೆಂಕಿ ಹಚ್ಚಿ ಸುಟ್ಟು ಕೊಂದು ಕಾಡಿನಲ್ಲಿ ಹೂತು ಹಾಕಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
 
ಮರಳು ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದ ಕೆಲ ವ್ಯಕ್ತಿಗಳ ವಿರುದ್ಧ ಸ್ಥಳೀಯ ಕೋರ್ಟ್‌ನಲ್ಲಿ  ಕೊಥಾರಿ ಪ್ರಕರಣ ದಾಖಲಿಸಿದ್ದರು.  ಈ ಕೇಸ್‌ನ್ನು ಹಿಂಪಡೆಯುವಂತೆ ಅವರ ಮೇಲೆ ಒತ್ತಡವಿತ್ತು. ಅದಕ್ಕೊಪ್ಪದ ಕಾರಣಕ್ಕೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Share this Story:

Follow Webdunia kannada