ಕಳೆದ ಹಲವು ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದು ತುರ್ತು ನಿಗಾ ಘಟಕದಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರವಾಗಿರುವ ಅವರು ಶೀಘ್ರದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಜಯಾ ಆರೋಗ್ಯದ ಬಗ್ಗೆ ಶುಕ್ರವಾರ ಮುಂಜಾನೆ ಆಸ್ಪತ್ರೆಯ ಅಧ್ಯಕ್ಷ ಡಾ.ಪ್ರತಾಪ್ ರೆಡ್ಡಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಜಯಾ ಈಗ ಮಾತನಾಡುತ್ತಿದ್ದಾರೆ. ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಅರಿವು ಅವರಿಗಾಗುತ್ತಿದೆ. ತಮಗೇನು ಬೇಕು ಬೇಡ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.
ನವೆಂಬರ್ 19 ರಂದು ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಜಯಾ ಸದ್ಯ ಮನೆ ಸೇರುವ ಸಾಧ್ಯತೆಗಳಿವೆ.
ಟ್ಯೂಬ್ ಮೂಲಕ ಆಹಾರ ಪಡೆಯುತ್ತಿದ್ದ ಅವರು ಕಳೆದೊಂದು ವಾರದಿಂದ ಮೃದು ಆಹಾರ ಸೇವಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಸೆಪ್ಟೆಂಬರ್ ತಿಂಗಳ 21ರಂದು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದಾರೆ ಎಂದು ಆಸ್ಪತ್ರೆ ಹೇಳಿಕೆ ನೀಡಿತ್ತು. ಆದರೆ ಅವರ ಆರೋಗ್ಯದ ಬಗ್ಗೆ ಖಚಿತ ಮಾಹಿತಿಗಳ್ಯಾವುದು ಹೊರ ಬರುತ್ತಿರಲಿಲ್ಲ. ದೆಹಲಿಯ ಏಮ್ಸ್ ಮತ್ತು ಲಂಡನ್‌ನಿಂದ ಆಗನಿಸಿದ್ದ ತಜ್ಞ ವೈದ್ಯರು ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ