ಕಾಂಗ್ರೆಸ್-ಬಿಜೆಪಿ ನಡುವೆ ಮೇಕೆದಾಟು ಯೋಜನೆ ಪಾದಯಾತ್ರೆ ಸಂಬಂಧಿಸಿದಂತೆ ರಾಜಕೀಯ ದಾಳ-ಪ್ರತಿದಾಳ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಕೋವಿಡ್ ಮೂರನೇ ಅಲೆ ಶಾಂತಗೊಂಡ ನಂತರ ಕಾಂಗ್ರೆಸ್ ನಾಯಕರು ನಾಲ್ಕು ದಿನಗಳ ತರುವಾಯ ತಾವು ನಿಲ್ಲಿಸಿದ್ದ ರಾಮನಗರದಿಂದಲೇ ಪಾದಯಾತ್ರೆ ಮುಂದುವರಿಸುವುದಾಗಿ ಹೇಳುತ್ತಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆಯನ್ನು ತಡೆಯಲು ವಿಫಲಗೊಂಡ ಕಾರಣ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಮತ್ತೊಮ್ಮೆ ಅಂಥ ಸ್ಥಿತಿ ಎದುರಾಗುವುದು ಬೇಡ ಎಂಬ ದೃಷ್ಟಿಯಿಂದ ಒಂದು ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಿದೆ.
ಈ ಸಭೆಯು ಫೆಬ್ರುವರಿ ಮೊದಲವಾರದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಶನಿವಾರ ಅಂತಾರಾಜ್ಯ ಜಲ ವಿವಾದ ಕುರಿತು ಸಭೆಯೊಂದನ್ನು ನಡೆಸಿದ ಬಳಿಕ ಹೊಗೇನಕಲ್ ಕಾವೇರಿ ಎರಡನೇ ಹಂತದ ಪ್ರಾಜೆಕ್ಟ್ ವಿಚಾರವಾಗಿಯೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಹೇಳಿದರು.