ನವದೆಹಲಿ: ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ದಿನಕ್ಕೊಂದು ಮೊಟ್ಟೆ ತಿಂದರೆ ಗಟ್ಟಿ ಮುಟ್ಟಾಗುತ್ತೀರಿ ಎನ್ನಲಾಗುತ್ತದೆ. ಹಾಗಂತ ನೀವು ತಿನ್ನುವ ಮೊಟ್ಟೆ ಎಷ್ಟು ಸುರಕ್ಷಿತ ಎನ್ನುವುದರಲ್ಲಿ ನಿಮ್ಮ ಆರೋಗ್ಯದ ಗುಟ್ಟಿದೆ ಎಂಬುದನ್ನು ಮರೆಯಬಾರದು.
ಇಂದಿನ ದಿನ ದೇಶದಲ್ಲಿ ಪ್ರಮುಖವಾಗಿ ಕಂಡುಬರುತ್ತಿರುವ ಸಮಸ್ಯೆಗಳಲ್ಲಿ ಆಹಾರ ಕಲಬೆರಕೆಯೂ ಒಂದು. ಪ್ಲಾಸ್ಟಿಕ್ ಸಕ್ಕರೆ, ಪ್ಲಾಸ್ಟಿಕ್ ಅಕ್ಕಿ ಬಗ್ಗೆ ಕೇಳಿದ್ದೇವೆ. ಅದೇ ರೀತಿ ಕೋಲ್ಕೊತ್ತಾದ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಮೊಟ್ಟೆಯೂ ಮಾರಾಟವಾಗುತ್ತಿದೆಯಂತೆ!
ಮಹಿಳೆಯೊಬ್ಬರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಎಚ್ಚೆತ್ತುಕೊಂಡಿರುವ ಕೋಲ್ಕೊತ್ತಾ ಮಹಾನಗರ ಪಾಲಿಕೆ ನಗರದಲ್ಲಿರುವ ಕೃತಕ ಮೊಟ್ಟೆಗಳ ಮಾರಾಟ ಜಾಲದ ಬಗ್ಗೆ ತನಿಖೆಗೆ ಆದೇಶಿಸಿದೆ.
ಈ ಕೃತಕ ಮೊಟ್ಟೆಯನ್ನು ಒಡೆದು ತವಾ ಮೇಲೆ ಆಮ್ಲೆಟ್ ಮಾಡಲು ಹಾಕಿದರೆ, ಥೇಟ್ ಪ್ಲಾಸ್ಟಿಕ್ ವಸ್ತುವನ್ನು ಬಿಸಿ ತವಾ ಮೇಲೆ ಹಾಕಿದರೆ ಏನಾಗುತ್ತದೋ, ಹಾಗೇ ಆಗಿತ್ತಂತೆ. ಮತ್ತಷ್ಟು ಪರೀಕ್ಷಿಸಲು ಇದಕ್ಕೆ ಬೆಂಕಿ ಹಚ್ಚಿದಾಗ ಹೊತ್ತಿ ಉರಿಯಿತು ಎಂದು ಮಹಿಳೆ ದೂರಿದ್ದಾಳೆ.
ನೋಡಲು ಅಸಲಿ ಮೊಟ್ಟೆಯಂತೇ ಕಾಣುವ ಇದರ ಒಳಗಿನ ಭಾಗವೂ ಪ್ಲಾಸ್ಟಿಕ್ ಆಗಿತ್ತು ಎನ್ನುವುದು ಮಹಿಳೆಯ ದೂರು. ಹಾಗಾಗಿ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎಂದು ಕೊಳ್ಳುವ ಮೊದಲು ಚೆನ್ನಾಗಿ ಪರೀಕ್ಷಿಸಿ ಖರೀದಿಸಿ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ